ಕಲಬುರಗಿ: ಪಂಪ ಬನವಾಸಿ ದೇಶವನ್ನು ನೆನಪಿಸುವಂತೆ ಕಡಕೋಳ ನೆನಪಿಸುವ ಮಡಿವಾಳಪ್ಪ ಕೂಡ ನಮಗೆ ಅಷ್ಟೇ ಮುಖ್ಯವಾಗುತ್ತಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಬಸವರಾಜ ಕೋಡಗುಂಟಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಲೇಖಕ ಕಡಕೋಳ ಮಲ್ಲಿಕಾರ್ಜುನ ಅವರ ‘ಕಡಕೋಳ ನೆಲದ ನೆನಪುಗಳು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮಡಿವಾಳಪ್ಪ ಕೇವಲ ಕಡಕೋಳದ ಪ್ರತಿನಿಧಿಯಾಗಿ ಕಾಣಿಸದೆ ಒಂದು ನೆಲದ, ಸಮಸ್ತ ಸಮುದಾಯದ ಪ್ರತಿನಿಧಿಯಾಗಿ ಕಾಣುತ್ತಾನೆ ಎಂದು ತಿಳಿಸಿದರು.
ಪುಸ್ತಕ ಪರಿಚಯಿಸಿದ ಮಹಾಂತೇಶ ನವಲಕಲ್, ಸಮಾಜದ ಎಲ್ಲ ಬಗೆಯ ಅಪಸವ್ಯಗಳಿಗೆ ಬಹಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಡಿವಾಳಪ್ಪನವರು ನಾಥ, ಆರೂಢ, ಸೂಫಿ, ಸಂತ ಪರಂಪರೆಯನ್ನು ಮುಂದುವರಿಸಿದ ನೇರ ನಿಷ್ಠುರ ತತ್ವಪದಕಾರ ಎಂದು ಬಣ್ಣಿಸಿದರು.
ಲೇಖಕ ಮಲ್ಲಿಕಾರ್ಜುನ ಕಡಕೋಳ ಕೂಡ ತಮ್ಮದೇ ನೆಲದ ಭಾಷೆಯನ್ನು ಬಳಸುವ ಮೂಲಕ ಮಡಿವಾಳಪ್ಪನವರ ಅಸಲಿ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ದೇಶಿ ಪದಗಳನ್ನು ಮಾರ್ಗಕ್ಕೆ ತಂದು ಮುಟ್ಟಿಸುವ ಸಾರ್ಥಕ ಮತ್ತು ಬರವಣಿಗೆ ಈ ಕೃತಿಯಲ್ಲಿದೆ ಎಂದು ವಿವರಿಸಿದರು.
ಕಡಕೋಳ ಮಠದ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಮಲ್ಲಿಕಾರ್ಜುನ ಕಡಕೋಳ ಉಪಸ್ಥಿತರಿದ್ದರು.
ಶರಣರಾಜ ಛಪ್ಪರಬಂದಿ ನಿರೂಪಿಸಿದರು. ಡಾ. ಗಿರಿಮಲ್ಲ ಕೊಂಬಿನ್ ಸ್ವಾಗತಿಸಿದರು. ಯಶವಂತ ಅಷ್ಟಗಿ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ದೊರೆ, ಪ್ರೊ. ಕಲ್ಯಾಣರಾವ ಪಾಟೀಲ, ಡಾ. ಸೂರ್ಯಕಾಂತ ಪಾಟೀಲ, ಡಾ. ಮೀನಾಕ್ಷಿ ಬಾಳಿ ಇತರರಿದ್ದರು.
ಕಾರ್ಯಕ್ರಮದ ಮಧ್ಯೆ ಎದೆ ತುಂಬಿ ಹಾಡುವೆನು ಖ್ಯಾತಿಯ ಗಜಲ್ ಗಾಯಕ ಸೂರ್ಯಕಾಂತ ಗಡಿ ಲಿಂಗದಳ್ಳಿ ಅವರು ಹಾಡಿದ ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಜನಮನಸೂರೆಗೊಂಡವು.