ಕೋಟಿಗೊಬ್ಬರು ಜ್ಞಾನದೇವ ದೊಡ್ಡಮೇಟಿ ಎಂಬ ಆದರ್ಶ ರಾಜಕಾರಣಿಗಳೂ

0
33
# ಕೆ.ಶಿವು.ಲಕ್ಕಣ್ಣವರ

ಆದರ್ಶ ರಾಜಕಾರಣಿಗಳು ಇದ್ದಾರೆಯೇ..? ಎಂದು ದುರ್ಬೀನು ಹಚ್ಚಿ ಹುಡುಕುವ ಈ ಕಾಲದಲ್ಲಿ ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಎಲ್ಲಾ ಆದರ್ಶಗಳ ಸಾಕಾರ ರೂಪವಾಗಿ ನಮ್ಮ ಕಣ್ಮುಂದೆ ನಿಲ್ಲುತ್ತಾರೆ. ಅವರ ಸರಳ ಬದುಕು ನೋಡಿದರೆ ಇವರು ಎರಡು ಸಲ ಶಾಸಕರಾಗಿದ್ದರಾ..? ಮಾಜಿ ಸಚಿವ ಅಂದಾನೆಪ್ಪ ದೊಡ್ಡಮೇಟಿ ಅವರ ಪುತ್ರರು ಇವರೇನಾ..? ಎಂಬ ಆಶ್ಚರ್ಯ, ಕುತೂಹಲ ಏಕಕಾಲಕ್ಕೆ ಮೂಡುತ್ತದೆ..!

ಆದರ್ಶ ರಾಜಕಾರಣಿಗಳು ಇದ್ದಾರೆಯೇ..?ಎಂದು ದುರ್ಬೀನು ಹಚ್ಚಿ ಹುಡುಕುವ ಈ ಕಾಲದಲ್ಲಿ ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಎಲ್ಲಾ ಆದರ್ಶಗಳ ಸಾಕಾರ ರೂಪವಾಗಿ ನಮ್ಮ ಕಣ್ಮುಂದೆ ನಿಲ್ಲುತ್ತಾರೆ. ಅವರ ಸರಳ ಬದುಕು ನೋಡಿದರೆ ಇವರು ಎರಡು ಸಲ ಶಾಸಕರಾಗಿದ್ದರಾ..?

Contact Your\'s Advertisement; 9902492681

ಮಾಜಿ ಸಚಿವ ಅಂದಾನೆಪ್ಪ ದೊಡ್ಡಮೇಟಿ ಅವರ ಪುತ್ರರು ಇವರೇನಾ..? ಎಂಬ ಆಶ್ಚರ್ಯ, ಕುತೂಹಲ ಏಕಕಾಲಕ್ಕೆ ಮೂಡುತ್ತದೆ. ಉಜ್ವಲ ರಾಜಕೀಯ ಹಿನ್ನೆಲೆ ಹೊಂದಿರುವ ರಾಜ್ಯದ ಕೆಲವೇ ಕುಟುಂಬಗಳಲ್ಲಿ ರೋಣ ತಾಲೂಕು ಜಕ್ಕಲಿಯ ದೊಡ್ಡಮೇಟಿ ಕುಟುಂಬವೂ ಒಂದು. ರಾಜಕೀಯಕ್ಕಾಗಿ ಆಸ್ತಿ ಹಾಳು ಮಾಡಿಕೊಂಡ ಬೆರಳೆಣಿಕೆಯಷ್ಟು ಕುಟುಂಬಗಳಲ್ಲಿಯೂ ದೊಡ್ಡಮೇಟಿ ಕುಟುಂಬವೂ ಒಂದು ಎಂದು ಹೇಳಬಹುದು.

ಆ ಗ್ರಾಮದ ಅಂದಾನೆಪ್ಪ ದೊಡ್ಡಮೇಟಿ 40-60 ರ ದಶಕದಲ್ಲಿ ರಾಜ್ಯದ ಪ್ರಭಾವಿ ಮುಖಂಡರಾಗಿದ್ದವರು. ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಅಂದಿನ ಕಾಲದಲ್ಲಿ ಗಾಂಧೀಜಿ, ನೆಹರೂ ಜೊತೆಗೆ ನೇರ ಸಂಪರ್ಕ ಹೊಂದಿದ್ದವರು. ಸ್ವಾತಂತ್ರ್ಯ ಚಳವಳಿ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ಸಣ್ಣ ಗ್ರಾಮ ಜಕ್ಕಲಿಗೆ ಪಂ.ಜವಾಹರಲಾಲ ನೆಹರೂ (1931), ಮಹಾತ್ಮಾ ಗಾಂಧೀಜಿ (1934) ಬಂದು ಹೋಗಲು ಅವರನ್ನು ಅಂದಾನೆಪ್ಪ ದೊಡ್ಡಮೇಟಿ ಆಯಸ್ಕಾಂತದಂತೆ ಸೆಳೆದದ್ದು ಈಗ ಇತಿಹಾಸ.

ಅಂತಹ ಮಹಾನುಭಾವರ ಪುತ್ರ ಜ್ಞಾನದೇವ ದೊಡ್ಡಮೇಟಿ ಮೊದಲಿನಿಂದಲೂ ರಾಜಕೀಯವನ್ನು ದ್ವೇಷಿಸುತ್ತಿದ್ದವರು. ತಂದೆ ಅಂದಾನೆಪ್ಪ ಅವರು ರಾಜಕೀಯ ಮಾಡುವುದು ಸಹ ಜ್ಞಾನದೇವ ಅವರಿಗೆ ಹಿಡಿಸುತ್ತಿರಲಿಲ್ಲ..!

ರಾಜಕೀಯ ಬಿಟ್ಟು ಬಿಡುವಂತೆ ಒಂದು ಸಲ ತಂದೆಗೆ ಪತ್ರ ಕೂಡ ಬರೆದಿದ್ದರು. ಕನ್ನಡ ಎಂ.ಎ. ಪಾಸಾಗಿದ್ದ ಜ್ಞಾನದೇವ ಅವರಿಗೆ ತನ್ನ ಸಹಪಾಠಿಗಳಾದ ಡಾ.ಚಂದ್ರಶೇಖರ ಪಾಟೀಲ, ಡಾ.ಎಂ.ಎಂ.ಕಲಬುರ್ಗಿ, ಡಾ.ಗಿರಡ್ಡಿ ಗೋವಿಂದರಾಜ, ಸಂಗಮನಾಥ ಹಂಡಿ ಮುಂತಾದವರಂತೆ ತಾನೂ ಪ್ರಾಧ್ಯಾಪಕನಾಗಿ ಸೇವೆ ಮಾಡಬೇಕು ಇಲ್ಲವೇ ಪತ್ರಕರ್ತನಾಗಬೇಕೆಂಬ ಉತ್ಕಟ ಇಚ್ಛೆ ಇತ್ತು..!

ಪಾಪು ಪ್ರಪಂಚದಲ್ಲಿ ಸೇವೆ: ತಮ್ಮ ತಂದೆ ಶಾಸಕ, ಸಚಿವರಿದ್ದಾಗಲೂ ಜ್ಞಾನದೇವ ರಾಜಕೀಯದ ಕಡೆಗೆ ಒಲವು ತೋರದೇ ಓದು, ಬರಹದತ್ತಲೇ ಗಮನ ಹರಿಸಿದವರು. ಒಂದು ಸಲ ಪ್ರಾಧ್ಯಾಪಕ ಹುದ್ದೆಯ ಸಂದರ್ಶನಕ್ಕೂ ಹೋಗಿದ್ದರು. ಹುಬ್ಬಳ್ಳಿಯಲ್ಲಿ ಪಾಟೀಲ ಪುಟ್ಟಪ್ಪ ಅವರ ಪ್ರಪಂಚ ವಾರಪತ್ರಿಕೆಯಲ್ಲಿ 1963 ಮತ್ತು 64ರಲ್ಲಿ ಕೆಲಸ ಮಾಡಿದ್ದಾರೆ. ಆಗ ಅವರಿಗೆ ದೊರೆಯುತ್ತಿದ್ದ 150 ರೂಪಾಯಿ ವೇತನದಲ್ಲಿ 50 ರೂಪಾಯಿ ಕೊಠಡಿ ಬಾಡಿಗೆ ಕೊಟ್ಟು 100 ರೂಪಾಯಿನಲ್ಲಿ ಜೀವನ ಸಾಗಿಸುತ್ತಿದ್ದವರು. ಆಗ ಅವರಿಗೆ 2-3 ತಿಂಗಳಿಗೊಮ್ಮೆ ವೇತನ ಬರುತ್ತಿತ್ತು. ಆಗಿನ ‘ಸಂಗ್ರಾಮ: ಪತ್ರಿಕೆಯಲ್ಲಿಯೂ ಕೆಲ ದಿನ ಜ್ಞಾನದೇವ ದೊಡ್ಡಮೇಟಿಯವರು ಕೆಲಸ ಮಾಡಿದ್ದವರು.

ತಂದೆಗೆ ತಕ್ಕ ಮಗ: 1978 ರಲ್ಲಿ ರೋಣ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯ, 1983, 1985 ರಲ್ಲಿ ಆಡಳಿತಾರೂಢ ಜನತಾ ಪಕ್ಷದ ಶಾಸಕ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಕೆಲವು ತಿಂಗಳು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಜ್ಞಾನದೇವ ದೊಡ್ಡಮೇಟಿ ಅವರು ಈಗ ತಮ್ಮೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ತಂದೆ ಅಂದಾನೆಪ್ಪ ಅನೇಕ ಸಲ ಶಾಸಕರು, ಸಚಿವರಾಗಿದ್ದರೂ ಜಕ್ಕಲಿ ಗ್ರಾಮದಲ್ಲಿ ಅವರ ಪೂರ್ವಜರು ಕಟ್ಟಿಸಿದ ಹಳೆಯ ಮನೆಯಲ್ಲೇ ಜೀವನ ಸಾಗಿಸಿದರು. ಆದರ್ಶವೇ ಮೈವೆತ್ತಂತಿದ್ದ ತಂದೆಗೆ ತಕ್ಕ ಮಗನಾದ ಜ್ಞಾನದೇವ ಎರಡು ಸಲ ಶಾಸಕರಾದರೂ ಹೊಸಮನೆ ಕಟ್ಟಿಸಲಿಲ್ಲ.

ಮಾಜಿ ಶಾಸಕರಾದ ನಂತರವೂ ಮನೆ ಕಟ್ಟೆಯ ಮೇಲೆ ಕಟ್ಟಿಸಿಕೊಂಡ 8-6 ಅಡಿ ಅಗಲದ ಕೊಠಡಿಗೆ ಮೌನ ಎಂದು ಹೆಸರು ಬರೆಸಿದ್ದು, ಅದರಲ್ಲೇ ಮೌನದಿಂದ ದಿನದ ಹೆಚ್ಚಿನ ಸಮಯ ಕಳೆಯುತ್ತಾರೆ. 80 ರ ಹರೆಯದ ಜ್ಞಾನದೇವ ಈಗಲೂ ಚಾಳೀಸು ಹಾಕದೇ ಓದುತ್ತಾರೆ, ಬರೆಯುತ್ತಾರೆ. ಕಾಲೇಜು ದಿನಗಳಿಂದಲೂ ರೂಢಿಸಿಕೊಂಡು ಬಂದಿರುವ ದಿನಚರಿ ಬರೆಯುವುದನ್ನು ಈಗಲೂ ಮುಂದುವರಿಸಿದ್ದಾರೆ..!
ಜೀವನದಲ್ಲಿ ತ್ಯಾಗಕ್ಕೆ ತುಂಬಾ ಮಹತ್ವ ಕೊಡುವ ಅವರು ತಮ್ಮ ಕೊಠಡಿಯಲ್ಲಿ ಟೇಬಲ್ ಮೇಲೆ ತ್ಯಾಗದ ಸಂಕೇತವಾದ ಮಹಾವೀರನ ಮೂರ್ತಿ ಇಟ್ಟುಕೊಂಡಿದ್ದಾರೆ.

# ರಾಜಕೀಯ ಪಿತ್ತ ನೆತ್ತಿಗೇರಲೇ ಇಲ್ಲ: ಅಂದಾನೆಪ್ಪ ಅವರ ಪುತ್ರ ಎಂದಾಗಲಿ, ಬ್ರಿಟಿಷ್ ಕಾಲದಲ್ಲೇ ಮುಂಬೈ ಸರಕಾರದಲ್ಲಿ ಸಚಿವರಾಗಿದ್ದ ಸರ್.ಸಿದ್ದಪ್ಪ ಕಂಬಳಿ ಅವರ ಸಂಬಂಧಿ ಎಂಬುದನ್ನಾಗಲಿ ಜ್ಞಾನದೇವ ಎಂದೂ ತಲೆಗೆ ಹಚ್ಚಿಕೊಂಡವರಲ್ಲ. ಜನ ಕರೆದು ಅಧಿಕಾರ ಕೊಟ್ಟಾಗ ಶಾಸಕನಾದೆ, ಅದೇ ಜನ ಮುಂದೆ ಚುನಾವಣೆಯಲ್ಲಿ ಸೋಲಿಸಿದಾಗ ಅವೆರಡನ್ನು ಸಮಾನ ಭಾವದಿಂದಲೇ ಸ್ವೀಕರಿಸಿದೆ ಎನ್ನುವ ಅವರು 1989 ರ ಚುನಾವಣೆಯಲ್ಲಿ ಸೋತ ಮೇಲೆ ಸಕ್ರಿಯ ರಾಜಕೀಯಕ್ಕೆ ಪೂರ್ಣ ವಿದಾಯ ಹೇಳಿದರು ಜ್ಞಾನದೇವ ದೊಡ್ಡಮೇಟಿಯವರು.

1994 ರಲ್ಲಿ ಜನತಾ ದಳದ ಪರ ಅಲೆ ಇದ್ದಾಗ ಹೆಗಡೆ, ದೇವೇಗೌಡ, ಬೊಮ್ಮಾಯಿ ಕರೆದು ಟಿಕೆಟ್ ಕೊಟ್ಟರೂ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಇವರ ಆತ್ಮಸಾಕ್ಷಿ ಒಪ್ಪಲಿಲ್ಲ. ಆಗ ಅವರೇ ಸೂಚಿಸಿದ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಜನತಾ ದಳದಿಂದ ಗೆದ್ದು ಶಾಸಕರಾದರು.

ಶಾಸಕ ಬಿದರೂರ ಜೊತೆಗೆ ಆಗ ಬೆಂಗಳೂರಿಗೆ ಹೋಗಿದ್ದ ಜ್ಞಾನದೇವ ಅವರನ್ನು ನೋಡಿದ ರಾಮಕೃಷ್ಣ ಹೆಗಡೆ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವೆಂದು ಪ್ರತ್ಯಕ್ಷದರ್ಶಿಗಳು ಈಗಲೂ ಹೇಳುತ್ತಾರೆ.

ಜ್ಞಾನದೇವ ದೊಡ್ಡಮೇಟಿ ಅವರುಎರಡು ಸಲ ಶಾಸಕರಾದರೂ ಪೂರ್ಣಾವಧಿ ರಾಜಕಾರಣಿಯಂತೆ ಪೋಸು ಕೊಡಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ. ವಿಧಾನಮಂಡಲದ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷರಾಗಿದ್ದಾಗ ಶಾಸಕರು ಕ್ಷೇತ್ರದ ಜನತೆಗೆ ಸದಾ ಸಿಗಲಿ ಎಂಬ ಉದ್ದೇಶದಿಂದ ವಾರಕ್ಕೊಮ್ಮೆ ಸಮಿತಿ ಸಭೆ ಕರೆಯುವ ಬದಲು 15 ದಿನಕ್ಕೊಮ್ಮೆ ಕರೆಯುತ್ತಿದ್ದರು.

# ಸರಳ ಜೀವನ —

ಅನೇಕರು ಒಮ್ಮೆ ರಾಜಕೀಯ ಪ್ರವೇಶಿಸಿ ಆ ನಂಜು ಏರಿಸಿಕೊಂಡು ತಮ್ಮದೇ ಗತ್ತಿನಲ್ಲಿ ಮೆರೆಯುತ್ತಿರುವ ಈ ಕಾಲದಲ್ಲಿ ಜ್ಞಾನದೇವ ಅದಕ್ಕೆ ಅಪವಾದವಾಗಿ ಕಾಣುತ್ತಾರೆ..!

ಎರಡು ಸಲ ಶಾಸಕರಾಗಿದ್ದಾಗಲೂ, ನಂತರ ಮಾಜಿ ಆದಾಗಲೂ ಕೆಂಪು ಬಸ್‌ಗಳಲ್ಲೇ ಪ್ರಯಾಣ ಮಾಡುತ್ತಿದ್ದವರು ಜ್ಞಾನದೇವ ದೊಡ್ಡಮೇಟಿ ಅವರು. ವೃದ್ಧಾಪ್ಯದ ಕಾರಣದಿಂದ ಕೆಲ ತಿಂಗಳ ಹಿಂದೆಯಷ್ಟೇ ಮೊಮ್ಮಕ್ಕಳ ಒತ್ತಾಯಕ್ಕೆ ಮಣಿದು ಬ್ಯಾಂಕಿನಿಂದ ಸಾಲ ಪಡೆದು ಮಾರುತಿ ಅಲ್ಟೋ ಕಾರ್ ಕೊಂಡಿದ್ದಾರೆ. ಮಾಜಿ ಶಾಸಕರಿಗೆ ಬರುವ ಪಿಂಚಣಿ ಹಣದಲ್ಲೇ ಕಾರಿನ ಸಾಲದ ಕಂತುಗಳನ್ನು ಕಟ್ಟುತ್ತಿದ್ದಾರೆ. ತಂದೆಯಿಂದ ಬಂದಿದ್ದ 100 ಎಕರೆ ಆಸ್ತಿಯನ್ನು ನಾಲ್ಕು ಜನ ಗಂಡು ಮಕ್ಕಳಿಗೆ ಸಮಾನ ಹಂಚಿಕೆ ಮಾಡಿದ್ದು, ಎಲ್ಲರೂ ಕೃಷಿಯನ್ನೇ ಮಾಡುತ್ತಿದ್ದಾರೆ..!

ಇವರ ತಂದೆ ಅಂದಾನೆಪ್ಪ ಅವರಿಗೆ ಪಿತ್ರಾರ್ಜಿತ ಆಸ್ತಿಯಾಗಿ 350 ಎಕರೆ ಜಮೀನು, ಲಕ್ಷಗಟ್ಟಲೇ ಹಣ ಬಂದಿದ್ದರೂ ರಾಜಕೀಯ ಸೇರಿ ಬಹುತೇಕ ಜಮೀನು, ಹಣ ಕಳೆದುಕೊಂಡಿದ್ದರು..!

1972 ರಲ್ಲಿ ವಿಧಾನಸಭೆ ವಿಸರ್ಜನೆಯಾದಾಗ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೆಎಂಸಿಗೆ ದಾಖಲಿಸಲಾಗಿದ್ದ ಅಂದಾನೆಪ್ಪ ಅವರನ್ನು ಜ್ಞಾನದೇವ 500 ರೂಪಾಯಿ ತುಂಬಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದರು..!

# ಮೊದಲ ಚುನಾವಣೆಗೆ 4,500 ರೂ. ಖರ್ಚು —

ಮೂರು ಸಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಎರಡು ಸಲ ಗೆದ್ದು ಒಮ್ಮೆ ಸೋತಾಗ ಚುನಾವಣೆಯಲ್ಲಿಯೂ ಸರಳತೆಯನ್ನೇ ಮೆರೆದಿದ್ದರು ಜ್ಞಾನದೇವ ದೊಡ್ಡಮೇಟಿ ಅವರು..!

ಅವರು ಮೊದಲ ಚುನಾವಣೆಗೆ ಸ್ಪರ್ಧಿಸಿದಾಗ ನಾಮಪತ್ರ ಸಲ್ಲಿಕೆ ಶುಲ್ಕ 500 ರೂಪಾಯಿ ಸೇರಿದಂತೆ 4,500 ರೂಪಾಯಿಗಿಂತ ಹೆಚ್ಚಿಗೆ ಹಣ ಖರ್ಚು ಮಾಡಲಿಲ್ಲ. ಇವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಆಯಾ ಗ್ರಾಮಗಳ ಜನರೇ ಸ್ವಯಂ ಪ್ರೇರಣೆಯಿಂದ ಹಣ ಸಂಗ್ರಹಿಸಿ ಇವರ ಪ್ರಚಾರದ ಖರ್ಚು ನೋಡಿಕೊಂಡಿದ್ದರು..!

# ಕಟ್ಟಾ ಕಾಂಗ್ರೆಸ್ ವಿರೋಧಿ —

ತಂದೆ ಅಂದಾನೆಪ್ಪ ಕಟ್ಟಾ ಕಾಂಗ್ರೆಸ್ಸಿಗರಾಗಿದ್ದರೂ ಜ್ಞಾನದೇವ ಅವರ ಮನಸ್ಸು ಸದಾ ಕಾಂಗ್ರೆಸ್ ವಿರೋಧಿಯಾಗಿತ್ತು. ಅವರು 1978 ರಲ್ಲಿ ರೋಣ ಟಿಡಿಬಿ ಸದಸ್ಯರಾದಾಗಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದವರು..!

1983 ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ವೀರಣ್ಣ ಮತ್ತಿಕಟ್ಟಿ ಅವರ ವಿರುದ್ಧ ಜನತಾ ಪಕ್ಷದಿಂದ ಗೆದ್ದು ಬಂದವರು. 1985 ರಲ್ಲಿ ಅದೇ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಆರ್.ಎಸ್.ಪಾಟೀಲ ಅವರನ್ನು ಸೋಲಿಸಿದರು. ಎರಡೂ ಚುನಾವಣೆಗಳಲ್ಲಿ ಅವರ ಗೆಲುವಿನ ಅಂತರ 10,000 ಮತಗಳಿಗಿಂತ ಹೆಚ್ಚಿತ್ತು..!

# ಗುಡಿ-ಗುಂಡಾರ ಸುತ್ತುವವರಲ್ಲ —

ಜ್ಞಾನದೇವ ದೊಡ್ಡಮೇಟಿ ಅವರು ಎಂದೂ ದೇವರು, ದಿಂಡಿರು ಅಂತ ಗುಡಿ ಗುಂಡಾರ ಸುತ್ತಿದವರಲ್ಲ..!

ಅವರು ರೋಣದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಹಳ್ಳಿ, ಪಟ್ಟಣಗಳಲ್ಲಿ ಮತ ಯಾಚನೆ ಸಮಯದಲ್ಲಿ ದೇವಾಲಯಗಳಿಗೆ ಹೋದಾಗ ಟೆಂಗಿನಕಾಯಿ ಒಡೆಸಲು, ಆರತಿ ತಟ್ಟೆಗೆ ಕಾಣಿಕೆ ಸಲ್ಲಿಸಲು ಅವರ ಪಕ್ಷದ ಕಾರ್ಯಕರ್ತರೇ ಕಿಸೆಯಿಂದ ಹಣ ಹಾಕುತ್ತಿದ್ದರು..!

# ಕನ್ನಡಪರ ಕಳಕಳಿ —

ಜ್ಞಾನದೇವ ದೊಡ್ಡಮೇಟಿ ಅವರು ಸಹ ತಮ್ಮ ತಂದೆಯಂತೆಯೇ ಕನ್ನಡ ನಾಡು, ನುಡಿ ಸೇವೆಗಾಗಿ ಜೀವನವನ್ನೇ ಮುಡುಪಾಗಿಟ್ಟವರು. 1955 ರಲ್ಲಿ ಬೆಳಗಾವಿಯಲ್ಲಿ ಓದುತ್ತಿದ್ದಾಗ ಭಾಷಾವಾರು ಪ್ರಾಂತಗಳ ರಚನೆ ಸಮಯದಲ್ಲಿ ಕನ್ನಡ ಪರ ಹೋರಾಟ ಮಾಡಿದ್ದವರು. ಕಳೆದ ವರ್ಷ ಗಜೇಂದ್ರಗಡದಲ್ಲಿ ಜರುಗಿದ ಗದಗ ಜಿಲ್ಲಾ ‘4 ನೇ ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಿರುವುದು ಅವರ ಕನ್ನಡಾಭಿಮಾನ, ಸಾಹಿತ್ಯ ಪ್ರೇಮಕ್ಕೆ ಸಾಕ್ಷಿಯಾಗಿದೆ..!

# ಬರವಣಿಗೆ ಹುಚ್ಚು —

ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕತೆ, ಕವನ, ಲೇಖನಗಳನ್ನು ಬರೆಯುತ್ತಿದ್ದ ಜ್ಞಾನದೇವ ದೊಡ್ಡಮೇಟಿ ಅವರು 1970 ರಲ್ಲಿ ‘ನಮ್ಮೂರು ಜಕ್ಕಲಿ’ ಎಂಬ ಪುಸ್ತಕ ಬರೆದಿದ್ದಾರೆ..!

1980 ರಲ್ಲಿ ‘ಕನ್ನಡದ ಉಸಿರು ಅಂದಾನೆಪ್ಪ ದೊಡ್ಡಮೇಟಿ’ ಎಂಬ ಪುಸ್ತಕ ಬರೆದಿದ್ದಾರೆ. ಅಮೀನಗಡದ ಶ್ರೀ.ಪ್ರಭುಲಿಂಗ ಸ್ವಾಮಿಗಳ ಹಿಂದೆ ಅವರ ಭಕ್ತನಾಗಿ ಬೆನ್ನುಹತ್ತಿ ‘ಪ್ರಭುಮಾನಸ ಚರಿತೆ’ ಪುಸ್ತಕ ಬರೆದಿದ್ದಾರೆ. ಅವರು ಬರೆದ ಇನ್ನೂ ಕೆಲವು ಲೇಖನಗಳು ಪ್ರಕಟಗೊಳ್ಳಬೇಕಾಗಿದೆ..!

# ಜ್ಞಾನದೇವರ ದೊಡ್ಡಮೇಟಿ ಅವರ ಆಣಿಮುತ್ತುಗಳು —

* ರಾಜಕೀಯ ಪರಿವರ್ತನೆಗಳೆಂಬುದೆಲ್ಲ ಸುಳ್ಳು. ರಾಜಕೀಯ ವ್ಯವಸ್ಥೆಯಲ್ಲಿಯೇ ಅಮೂಲಾಗ್ರ ಬದಲಾವಣೆಯಾಗಬೇಕು..!

* ಪಾಪು ಅವರ ಪ್ರಪಂಚ ವಾರಪತ್ರಿಕೆಯಲ್ಲಿ ಬರವಣಿಗೆ ತರಬೇತಿ ಪಡೆದೆ. ಆಗ ಗ್ರಾಮಾಯಣ ಬರೆಯುತ್ತಿದ್ದೆ. ಸಾಹಿತ್ಯ ನನ್ನ ವ್ಯಕ್ತಿತ್ವವನ್ನು ರೂಪಿಸಿತು. ಸತ್ಯಕಾಮರ ಒಡನಾಟ ನನ್ನಲ್ಲಿರುವ ಕೀಳರಿಮೆ ಕಿತ್ತು ಹಾಕಿತು. ಸತ್ಯಕಾಮರು ಕೆಲ ದಿನ ಜಕ್ಕಲಿಯಲ್ಲೇ ಇದ್ದರು. ಜೀವನದಲ್ಲಿ ಯಾರಿಗೂ ಶಿಷ್ಯ ಆಗಬಾರದು. ಯಾರಿಗೂ ಗುರುವಾಗಬಾರದು. ಶಿಷ್ಯನಾದರೆ ಗುರು ದಾರಿ ತಪ್ಪಿಸುತ್ತಾನೆ. ಗುರುವಾದರೆ ಶಿಷ್ಯ ದಾರಿ ತಪ್ಪಿಸುತ್ತಾನೆ. ನಮ್ಮಷ್ಟಕ್ಕೆ ನಾವಿರಬೇಕು..!

* ನಾನು ಬೆಳಗ್ಗೆ ವಾಕಿಂಗ್, ವ್ಯಾಯಾಮ ಯಾವುದೂ ಮಾಡುವುದಿಲ್ಲ. ನಮ್ಮ ಮನಸ್ಸು ಪರಿಶುದ್ಧವಾಗಿದ್ದರೆ ಆರೋಗ್ಯ ಕೆಡುವುದಿಲ್ಲ. ಮನಸ್ಸನ್ನು ಬೆತ್ತಲೆಗೊಳಿಸಬೇಕು. ಮನಸ್ಸು ಕಲುಷಿತಗೊಳಿಸಿಕೊಂಡರೆ ಆರೋಗ್ಯ ಕೆಡುತ್ತದೆ. ಶುದ್ಧ ಮನಸ್ಸು ಉತ್ತಮ ಆರೋಗ್ಯದ ಗುಟ್ಟು!

ಹೀಗೆಯೇ ಬದುಕಿದ ಜ್ಞಾನದೇವ ದೊಡ್ಡಮೇಟಿ ಅವರು ಎಂದಿಗೂ ಅಜರಾಮರರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here