ಕಲಬುರಗಿ : ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕ ಡಾ.ಫಾರುಖ್ ಅಹ್ಮದ್ ಮಣ್ಣೂರ್ ಅವರ ಸಾಮಾಜಿಕ ಕರ್ತವ್ಯ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಹೇಳಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಬಾರೆಹಿಲ್ಸ್ ಸರ್ಕಲ್ ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಪತ್ರಕರ್ತರ ಮತ್ತು ಅವರ ಕುಟುಂಬದವರ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಡಾ.ಫಾರುಖ್ ಅವರು ತಾಲೂಕು ಕೇಂದ್ರಗಳಲ್ಲಿ ಶುದ್ಧ ನೀರಿನ ಅರವಟ್ಟಿಗೆ ಸ್ಥಾಪನೆ.ಬೀದಿ ವ್ಯಾಪಾರಿಗಳಿಗೆ ಕೊಡೆ ವಿತರಣೆ ಸೇರಿದಂತೆ ಅನೇಕ ಕಾರ್ಯಗಳ ಮೂಲಕ ಸಾಮಾಜಿಕ ಕಳಕಳಿ ಹೊಂದಿದ್ದಾರೆ.ಪಾಲಿಕೆಯ ಸ್ವಚ್ಛಭಾರತ ಯೋಜನೆಯ ಬ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಒತ್ತಡದ ಕೆಲಸದಲ್ಲಿರುವ ಪತ್ರಕರ್ತರ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದು ಒಳ್ಳೆಯ ಕೆಲಸ ಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ದೇವಯ್ಯ ಗುತ್ತೇದಾರ, ಸದಾನಂದ ಜೋಶಿ, ಶೇಷಮೂರ್ತಿಅವಧಾನಿ ಆಗಮಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಿದರು.
ಪತ್ರಕರ್ತರಿಗೆ ಆಸ್ಪತ್ರೆಯಿಂದ ರಿಯಾಯ್ತಿ ಸೌಲಭ್ಯದ ಆರೋಗ್ಯ ಕಾರ್ಡ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕ ಡಾ.ಫಾರುಖ್ ಅಹ್ಮದ್ ಮಣ್ಣೂರ್, ಜೆಡಿಎಸ್ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ನಾಸೀರ ಹುಸೇನ್ ಉಸ್ತಾದ, ಬಾಲರಾಜ ಗುತ್ತೇದಾರ, ಶಾಮರಾವ ಸೂರನ್, ಬಸವರಾಜ ತಡಕಲ್, ಅಲಿಂ ಇನಾಮದಾರ, ಪ್ರವೀಣ ಜಾಧವ ಹಾಗೂ ಆಸ್ಪತ್ರೆ ಸಿಬ್ಬಂದಿವರ್ಗದವರು ಇದ್ದರು.