ಕಲಬುರಗಿ: ಪಠ್ಯಪುಸ್ತಕ ಗಳ ಪರಿಷ್ಕರಣೆಯಲ್ಲಿ ಮಹನೀಯರಿಗೆ ಅಪಮಾನ ಮಾಡಿ ಕನ್ನಡ ಅಸ್ಮಿತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಸ್ವಾಭಿಮಾನವಿದ್ದರೆ ತಕ್ಷಣ ವೇ ರಾಜೀನಾಮೆನೀಡಲಿ ಎಂದು ಮಾಜಿ ಸಚಿವರಾದ,ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ನಗರದ ಜಗತ್ ಸರ್ಕಲ್ ಬಳಿಯ ಬಸವೇಶ್ವರ ಪ್ರತಿಮೆ ಮುಂದೆ ನಡೆದ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಅಧಿಕೃತ ಆದೇಶವಿಲ್ಲದ ಪರಿಷ್ಕೃತ ಸಮಿತಿ ಪಠ್ಯಪುಸ್ತಕದಲ್ಲಿ ಇದ್ದ ಮಹನೀಯರ ಪಾಠಗಳನ್ನು ಕೈಬಿಡಲಾಗಿದೆ. ಬುದ್ದ, ಬಸವ, ಅಂಬೇಡ್ಕರ್, ಭಗತ್ ಸಿಂಗ್, ಕುವೆಂಪು ಅವರ ಕುರಿತು ಅವಹೇಳನೆ ಮಾಡಲಾಗಿದೆ. ಅಷ್ಟೇಕೆ ಸ್ವಾತಂತ್ರ್ಯ ಹೋರಾಟಗಾರರಾದ ಸುರಪುರದ ರಾಜರ ಬಗ್ಗೆ ಇರುವ ಪಠ್ಯವನ್ನ ಕೈಬಿಡಲಾಗಿದೆ.
ದೇಶದ ಸಮಗ್ರತೆ ಹಾಗೂ ಸಂವಿಧಾನದ ಆಶಯಗಳಿವೆ ವಿರುದ್ದವಾಗಿ ಕೇಸರಿಕರಣದ ಪಾಠಗಳನ್ನು ಹೊಸ ಪಠ್ಯದಲ್ಲಿ ಸೇರಿಸಿ ಚಿಕ್ಕ ವಯಸ್ಸಿನ ಮಕ್ಕಳ ತಲೆಯಲ್ಲಿ ಕೋಮುವಾದ ತುಂಬಿಸಲು ಪ್ರಯತ್ನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸರ್ಕಾರದ ಆದೇಶವಿಲ್ಲದೇ ಸಮಿತಿಗೆ ಪಠ್ಯಪರಿಷ್ಕರಣೆ ಮಾಡಲು ಹಾಗೂ ಅದಕ್ಕಾಗಿ ರೂ 150 ಕೋಟೆ ಖರ್ಚು ಮಾಡಲು ಅಧಿಕಾರ ಕೊಟ್ಟವರು ಯಾರು ? ಈ ಎಲ್ಲ ಘಟನಾವಳಿ ಹಿನ್ನೆಲೆಯಲ್ಲಿ ಶಿಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಈ ಕೂಡಲೇ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪಅವರ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿದ್ದ ಪಠ್ಯಗಳನ್ನೇ ಮುಂದುವರೆಸಬೇಕು. ಒಂದು ವೇಳೆ ಪಠ್ಯಗಳನ್ನು ಪರಿಷ್ಕರಣೆ ಮಾಡಲೇಬೇಕಿಂದಿದ್ದರೆ ಶೈಕ್ಷಣಿಕ ವಲಯದ ತಜ್ಞರ ಸಮಿತಿಯನ್ನು ರಚಿಸಬೇಕು.
ಆ ಸಮಿತಿಯ ಮೂಲಕ ಈ ನಾಡಿದ ನೆಲದ ಮಹನೀಯರ ಸಾಧನೆಯನ್ನು ಪಠ್ಯದಲ್ಲಿ ಸೇರಿಸಲಿ. ಯಾಕೆಂದರೆ, ಬರಗೂರು ಸಮಿತಿ ಕನಿಷ್ಠ ಎರಡು ವರ್ಷಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಪಠ್ಯಗಳನ್ನು ರೂಪಿಸಿತ್ತು. ಆದರೆ ಚರ್ಕತೀರ್ಥ ಸಮಿತಿ ಕೇವಲ ಎರಡು ತಿಂಗಳಲ್ಲಿ ಆರ್ ಎಸ್ ಎಸ್ ಸಿದ್ದಾಂತಗಳನ್ನ ಪಠ್ಯದಲ್ಲಿ ಸೇರಿಸಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಈ ಕೂಡಲೇ ಪಠ್ಯಗಳನ್ನು ವಾಪಸ್ ಪಡೆಯಬೇಕು ಹಾಗೂ ಈ ಹಿಂದಿನ ಪಠ್ಯವನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಹೊಸ ಪಠ್ಯಗಳ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಪೇಚಿಗೆ ಸಿಲುಕಿದೆ. ಆಗಿರುವ ಲೋಪದೋಷಗಳನ್ನು ಸರಿಪಡಿಸಲುವ ಪರಿಷ್ಕೃತ ಪಠ್ಯಗಳನ್ನು ವಾಪಸ್ ಪಡೆಯಬೇಕು. ಅಲ್ಲಿಯವರೆಗೆ ಈ ಹೋರಾಟ ನಡೆಯುತ್ತದೆ. ಇದು ಗೋಕಾಕ್ ಮಾದರಿ ಚಳುವಳಿಯಾದಾಗ ಮಾತ್ರ ಸರ್ಕಾರ ಎಚ್ಚೆತ್ತುಗೊಳ್ಳಬಹುದು ಎಂದು ಮಾಜಿ ಶಾಸಕರಾದ ಬಿ.ಆರ್.ಪಾಟೀಲ್ ನುಡಿದರು.
ಸಚೇತಕರಾದ ಹಾಗೂ ಶಾಸಕರಾದ ಅಜಯ ಸಿಂಗ್, ಶಾಸಕರಾದ ಕನೀಜ್ ಫಾತೀಮಾ, ಮಾಜಿ ಸಚಿವರಾದ ಡಾ ಶರಣಪ್ರಕಾಶ ಪಾಟೀಲ, ಮಾಜಿ ಎಂ ಎಲ್ ಸಿಗಳಾದ ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ್, ಮಾಜಿ ಮೇಯರ್ ಶರಣುಮೋದಿ, ಹೋರಾಟಗಾರ್ತಿ ಕೆ.ನೀಲಾ, ಮಾಜಿ ಶಾಸಕ ಬಾಬುರಾವ ಚವ್ಹಾಣ್, ಶಿವಾನಂದ ಪಾಟೀಲ, ಸ್ವಾಮೀಜಿಗಳು, ಆರ್, ಕೆ. ಹುಡುಗಿ, ದಲಿತಪರ ಸಂಘಟನೆಗಳ ಮುಖಂಡರು, ಕ್ರೈಸ್ತ ಧರ್ಮಗುರುಗಳು ಸೇರಿದಂತೆ ಹಲವರಿದ್ದರು.