ವಾಡಿ: ತನ್ನನ್ನು ತಾನು ಬಂಜಾರಾ ಸಮಾಜದ ನಾಯಕ, ಸಮಾಜ ಸೇವಕ ಎಂದು ಹೇಳಿಕೊಂಡು ಚಿತ್ತಾಪುರ ಮತಕ್ಷೇತ್ರದಲ್ಲಿ ತಿರುಗತ್ತ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಅಪಪ್ರಚಾರಕ್ಕಿಳಿದಿರುವ ಮಣಕಂಠ ರಾಠೋಡ, ಅನ್ನಭಾಗ್ಯದ ಅಕ್ಕಿ ಕದಿಯುವ ಅಪರಾಧಿಯಾಗಿದ್ದಾರೆ. ತಾನು ಅಕ್ರಮವಾಗಿ ಖರೀದಿಸುವ ಪಡಿತರ ಅಕ್ಕಿಯಲ್ಲಿ ಬಡ ಬಂಜಾರಾರ ಅನ್ನದ ತುತ್ತಿದೆ ಎಂಬ ಕನಿಷ್ಟ ಜ್ಞಾನವಿಲ್ಲ ಎಂದು ವಾಡಿ ಬ್ಲಾಕ್ ಕಾಂಗ್ರೆಸ್‌ನ ಅಸಂಘಟಿತ ಕಾರ್ಮಿಕ ಸಂಘದ ಅಧ್ಯಕ್ಷ ವಿಶಾಲ ನಾಯಕ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಚಿತ್ತಾಪುರ ಮತಕ್ಷೇತ್ರದ ಪ್ರತಿಯೊಂದು ತಾಂಡಾಗಳಿಗೂ ಅನುದಾನ ಒದಗಿಸುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಂಜಾರಾ ಜನಾಂಗದ ಪ್ರಗತಿಗೆ ಶ್ರಮಿಸಿದ್ದಾರೆ. ಅನೇಕ ಸೇವಾಲಾಲ ಮಂದಿರಗಳ ಜೀರ್ಣೋದ್ಧಾರಕ್ಕೂ ಅನುದಾನ ಕೊಟ್ಟಿದ್ದಾರೆ. ಅವರು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲಾ ಸಮುದಾಯವನ್ನೂ ಸಮಾನತೆಯಿಂದ ಕಾಣುವ ಜಾತ್ಯಾತೀತ ನಾಯಕರಾಗಿದ್ದಾರೆ. ಖರ್ಗೆ ಚಿತ್ತಾಪುರಕ್ಕೆ ಕಾಲಿಟ್ಟ ಗಳಿಗೆಯಿಂದ ಕ್ಷೇತ್ರದ ಚಿತ್ರಣ ಬದಲಾಗಿದೆ. ರಸ್ತೆಗಳು ಸುಧಾರಣೆ ಕಂಡಿವೆ.
ಶೈಕ್ಷಣಿಕ ಕ್ಷೇತ್ರದ ಚೇತರಿಕೆ ಕಂಡಿದೆ. ಹೊಸ ವಸತಿ ಶಾಲೆಗಳು ಮಂಜೂರಾಗಿವೆ. ಕೃಷಿ ಮತ್ತು ಆರೋಗ್ಯ ಕ್ಷೇತ್ರವೂ ಜನಪರವಾಗಿ ನಿಂತಿವೆ. ಸಮಸ್ಯೆ ಹೇಳಿಕೊಂಡು ಬರುವ ಲಂಬಾಣಿಗರಿಗೂ ನೆರವಿನ ಹಸ್ತ ಚಾಚಿದ್ದಾರೆ. ಇದನ್ನೆಲ್ಲ ಅರಿಯದೆ ವೈಯಕ್ತಿಕ ದ್ವೇಶವನ್ನು ಮುಂದಿಟ್ಟುಕೊಂಡು ಪ್ರಗತಿಪರ ರಾಜಕಾರಣಿಯನ್ನು ಗಾಳಿಯಲ್ಲಿ ಟೀಕಿಸುತ್ತ ಅಪಪ್ರಚಾರಕ್ಕೆ ಮುಂದಾಗಿರುವುದು ಮಣಿಕಂಠನ ಅಪ್ರಬುದ್ಧತೆ ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಾರ ರಹಿತವಾಗಿ ಆರೋಪಿಸುವ ಕೆಟ್ಟ ಚಾಳಿ ರೂಢಿಸಿಕೊಂಡು ಬಂಜಾರಾ ಜನರನ್ನು ಪ್ರಿಯಾಂಕ್ ಖರ್ಗೆ ವಿರುದ್ಧ ಎತ್ತಿಕಟ್ಟುವ ಕೀಳು ಆಲೋಚನೆ ಹೊಂದಿರುವ ಮಂಣಿಕಂಠ ರಾಠೋಡ ಅವರ ದುರುದ್ಧೇಶ ಲಂಬಾಣಿಗರಿಗೆ ಅರ್ಥವಾಗಿದೆ. ಬಂಜಾರಾ ಸಮಾಜ ಕೇವಲ ಒಂದು ಪಕ್ಷ ಸೀಮಿತವಲ್ಲ. ಯಾರು ಸಮಾಜದ ಪ್ರಗತಿಗೆ ಶ್ರಮಿಸುತ್ತಾರೋ ಅವರನ್ನು ಬೆಂಬಲಿಸುವ ಜಾಗೃತ ಸಮಾಜವಾಗಿದೆ. ಖರ್ಗೆ ಅವರನ್ನು ಟೀಕಿಸಿ ಬಿಟ್ಟಿ ಪ್ರಚಾರ ಪಡೆಯಬಯಸುವವರಿಂದ ಬಂಜಾರರು ಎಚ್ಚರದಿಂದರಬೇಕು. ಅನ್ನಭಾಗ್ಯದ ಅಕ್ಕಿ ಕದ್ದು ಬಡವರ ಹೊಟ್ಟೆಯ ಮೇಲೆ ಹೊಡೆಯುವರನ್ನು ರಾಜಕೀಯದಿಂದ ದೂರವಿಡಬೇಕು. ಹಣದ ಅಹಮ್ಮಿನಲ್ಲಿ ಮೋಜು ಮಸ್ತಿಗೆ ಆಧ್ಯತೆ ಕೊಡುವ ಕೀಳು ಸಂಸ್ಕೃತಿಯ ವ್ಯಕ್ತಿಯಿಂದ ಯುವಕರು ಅಂತರ ಕಾಯ್ದುಕೊಳ್ಳಬೇಕು ಎಂದು ವಿಶಾಲ ನಾಯಕ ಮನವಿ ಮಾಡಿದ್ದಾರೆ.
Hi