ಕಲಬುರಗಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿಗೆ ಕೆಳಕಂಡ ವಿವಿಧ ಯೋಜನೆಗಳಡಿ ಆದಾಯೋತ್ಪನ್ನ, ಸೇವಾ ಹಾಗೂ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡಲಾಗುತ್ತಿದ್ದು, ಇದಕ್ಕಾಗಿ ಆಸಕ್ತಿಯುಳ್ಳ ಕಲಬುರಗಿ ಜಿಲ್ಲೆಯ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಶಾಸಕರ ಆಯ್ಕೆ ಸಮಿತಿ ಯೋಜನೆಗಳ ವಿವರ ಇಂತಿವೆ. ಉದ್ಯೋಗಿನಿ ಯೋಜನೆಯಡಿ ಭೌತಿಕ ಗುರಿ 42 ಹಾಗೂ ಆರ್ಥಿಕ ಗುರಿ 44.11 ಲಕ್ಷ ರೂ. ಗಳು ಇದ್ದು, ಈ ಯೋಜನೆಯಡಿ ಎಲ್ಲಾ ವರ್ಗದ ಮಹಿಳೆಯರಿಗೆ ಬ್ಯಾಂಕಿನಿಂದ ಕನಿಷ್ಟ 1 ಲಕ್ಷ ರೂ. ದಿಂದ ಗರಿಷ್ಟ 3 ಲಕ್ಷ ರೂ. ವರೆಗಿನ ಸಾಲ ಹಾಗೂ ನಿಗಮದಿಂದ ಸಹಾಯಧನ ನೀಡಲಾಗುವುದು. ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು. ಸಾಲ ಪಡೆಯಲು ಬ್ಯಾಂಕ್ ಖಾತೆಯೊಂದಿಗೆ ಆಧಾರ ಸೀಡಿಂಗ್ ಕಡ್ಡಾಯವಾಗಿರುತ್ತದೆ. ಫಲಾನುಭವಿಗಳನ್ನು ಮತಕ್ಷೇತ್ರವಾರು ಗುರಿಯನ್ವಯ ಶಾಸಕರ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುತ್ತದೆ.
ಕಿರುಸಾಲ ಯೋಜನೆ: ಈ ಯೋಜನೆಯಡಿ ಭೌತಿಕ ಗುರಿ 05 ಹಾಗೂ ಆರ್ಥಿಕ ಗುರಿ 10 ಲಕ್ಷ ರೂ. ಇದ್ದು, ಈ ಯೋಜನೆಯು ಶಾಸಕರ ಆಯ್ಕೆ ಸಮಿತಿ ಯೋಜನೆಯಾಗಿದ್ದು, ಇಲಾಖೆಯಡಿ ರಚನೆಯಾಗಿರುವ ಸ್ತ್ರೀಶಕ್ತಿ ಗುಂಪುಗಳು ಮಾತ್ರ 2 ಲಕ್ಷ ರೂ. ಗಳ ಬಡ್ಡಿರಹಿತ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ನಿಗದಿತ ಅರ್ಜಿಗಳನ್ನು ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ವಿತರಿಸಲಾಗುತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲಾ ಆಯ್ಕೆ ಸಮಿತಿ ಯೋಜನೆಗಳ ವಿವರ ಇಂತಿದೆ. ಚೇತನಾ (ದಮನಿತ ಮಹಿಳೆಯರು) ಪುನರ್ವಸತಿ ಯೋಜನೆಯಡಿ ಭೌತಿಕ ಗುರಿ 24 ಹಾಗೂ ಆರ್ಥಿಕ 7.38 ಲಕ್ಷ ರೂ. ಇರುತ್ತದೆ. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ (ಟ್ರಾನ್ಸಜೆಂಡರ್ಸ) ಯಡಿ ಭೌತಿಕ ಗುರಿ 30 ಹಾಗೂ ಆರ್ಥಿಕ 9.22 ಲಕ್ಷ ರೂ. ಇರುತ್ತದೆ. ಧನಶ್ರೀ ಯೋಜನೆ (ಹೆಚ್.ಐ.ವಿ ಸೋಂಕಿತ ಮಹಿಳೆಯರು)ಯಡಿ ಭೌತಿಕ ಗುರಿ 23 ಹಾಗೂ ಆರ್ಥಿಕ 7.07 ಲಕ್ಷ ರೂ. ಇರುತ್ತದೆ. ಈ ಯೋಜನೆಗಳಡಿ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಲು ಆಸಕ್ತ ಸಮುದಾಯದವರಿಗೆ ಯೋಜನೆಗಳಡಿ 30,000 ರೂ. ಗಳ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ.
ನಿಗದಿತ ಅರ್ಜಿ ನಮೂನೆಯನ್ನು ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಗಳಿಂದ ಅಥವಾ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ 2022ರ ಜುಲೈ 15 ರೊಳಗಾಗಿ ಸಮುದಾಯ ಆಧಾರಿತ ಸಂಸ್ಥೆಗಳಲ್ಲಿ ಸಲ್ಲಿಸಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.