ವಾಡಿ: ಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಮತ್ತು ವೃದ್ಧರು ನಾಯಿ ಕಡಿತಕ್ಕೆ ತುತ್ತಾಗಿ ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ರವಿವಾರ ಪಟ್ಟಣದ ಮಾರುಕಟ್ಟೆಗೆ ಆಗಮಿಸಿದ್ದ ರಾಮ ಮಂದಿರ ಬಡಾವಣೆಯ ನಿವಾಸಿ ಪುತ್ತಳಿಬಾಯಿ ಎಂಬ ೬೧ ವರ್ಷದ ವಯೋವೃದ್ಧೆ ನಾಯಿ ದಾಳಿಗೆ ಗಾಯಗೊಂಡಿದ್ದಾಳೆ. ನಡೆದುಕೊಂಡು ಹೋಗುತ್ತಿದ್ದಾಗ ಬೆನ್ನಟ್ಟಿ ಕಡಿಯಲು ಮುಂದಾದ ನಾಯಿಯಿಂದ ರಕ್ಷಣೆ ಪಡೆಯಲಾಗದೆ ವೃದ್ಧ ಮಹಿಳೆ ಪರದಾಡಿದ್ದು, ಕೈಗೆ ಬಾಯಿ ಹಾಕಿದ ನಾಯಿ ಮಾಂಸ ಹೀರಿದೆ.
ಕಳೆದ ಎರಡು ತಿಂಗಳಿಂದ ಪಟ್ಟಣದ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಿಂಡು ಹರಿದಾಡುತ್ತಿದ್ದರೂ ಪುರಸಭೆ ಆಡಳಿತ ಎಚ್ಚತ್ತುಕೊಳ್ಳದ ಕಾರಣ ಈಗ ಸಾರ್ವಜನಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವ ಪ್ರಸಂಗ ಸೃಷ್ಟಿಯಾಗಿದೆ. ಈಗಾಗಲೇ ಅನೇಕ ಜನರು ನಾಯಿ ಕಡಿತದಿಂದ ಗಾಯಗೊಂಡು ಮನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ರಕ್ತದ ರುಚಿ ನೋಡಿದ ನಾಯಿಗಳು ಶಾಲಾ ಮಕ್ಕಳ ಮೇಲೆ ದಾಳಿ ನಡೆಸಿದರೆ, ಜನರೇ ಅಧಿಕಾರಿಗಳ ಮತ್ತು ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ತಿರುಗಿಬೀಳುವ ಸಾಧ್ಯತೆಯಿದೆ.
ಕೂಡಲೇ ಪುರಸಭೆ ಆಡಳಿತ ಎಚ್ಚೆತ್ತುಕೊಂಡು ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಕಾಂಗ್ರೆಸ್ ಯುವ ಮುಖಂಡ ಹಣಮಂತ ಶಿವುಪುರ ಎಚ್ಚರಿಕೆ ನೀಡಿದ್ದಾರೆ.