ಬಹುಮನಿ ಕೋಟೆಯಲ್ಲಿನ ಅಕ್ರಮ ಮನೆಗಳ ತೆರವಿಗೆ ಆದೇಶ

0
123

ಕಲಬುರಗಿ: ನಗರದ ಐತಿಹಾಸಿಕ ೧೩ನೇ ಶತಮಾನದ ಬಹುಮನಿ ಕೋಟೆಯೊಳಗಿನ ಅಕ್ರಮ ಮನೆಗಳನ್ನು ಏಳು ದಿನಗಳಲ್ಲಿ ತೆರವುಗೊಳಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ಕಾಯ್ದೆ ಅನ್ವಯ ಸ್ಮಾರಕಗಳನ್ನು ಅತಿಕ್ರಮಿಸಿಕೊಳ್ಳಬಾರದು ಎಂಬ ನಿಯಮವಿದೆ. ಆದಾಗ್ಯೂ, ಇಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಅತಿಕ್ರಮಣಕಾರರು ಎಷ್ಟೇ ನೋಟಿಸ್ ಜಾರಿ ಮಾಡಿದರೂ ಸಹ ಇಲ್ಲಿಯವರೆಗೆ ತೆರವುಗೊಂಡಿಲ್ಲ. ಈಗಿನ ಅಂದಾಜಿನ ಪ್ರಕಾರ ಬಹುಮನಿ ಕೋಟೆಯಲ್ಲಿ ಸುಮಾರು ೨೮೦ ಮನೆಗಳು ಅನಧಿಕೃತವಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಒಂದು ವೇಳೆ ಅಕ್ರಮ ಮನೆಗಳನ್ನು ತೆರವುಗೊಳಿಸಿಕೊಳ್ಳದೇ ಹೋದಲ್ಲಿ ಇಲಾಖೆಯಿಂದ ಮನೆಗಳನ್ನು ನೆಲಸಮಗೊಳಿಸುವುದಾಗಿ ಎಚ್ಚರಿಸಿದೆ.

Contact Your\'s Advertisement; 9902492681

ಅಕ್ರಮ ಮನೆಗಳಲ್ಲಿ ಸರ್ಕಾರಿ ನೌಕರರು ಹಾಗೂ ಶ್ರೀಮಂತರು ಇದ್ದಾರೆ ಎನ್ನುವುದು ಸಹ ಗಮನಾರ್ಹ. ಅಲ್ಲದೇ ಅಕ್ರಮ ಮನೆಗಳಿದ್ದರೂ ಸಹ ಪಾಲಿಕೆಯಿಂದ ಕುಡಿಯುವ ನೀರಿನ ಪೂರೈಕೆ, ಗುಲಬರ್ಗಾ ವಿದ್ಯುತ್ ಪ್ರಸರಣಾ ನಿಗಮದಿಂದ ವಿದ್ಯುತ್ ಪೂರೈಕೆ ಮುಂತಾದವುಗಳು ಒದಗಿಸಲಾಗಿದ್ದು, ಈ ಕುರಿತು ನೋಟಿಸ್ ಜಾರಿಯಿಂದ ಅಕ್ರಮ ನಿವಾಸಿಗಳು ಯಾವುದೇ ರೀತಿಯಲ್ಲಿ ವಿಚಿಲಿತರಾಗುತ್ತಿಲ್ಲ.

ಈ ಹಿಂದೆ ಅಂಜುಂ ಪರವೇಜ್ ಅವರು ಜಿಲ್ಲಾಧಿಕಾರಿಗಳಾಗಿದ್ದಾಗ ಎಲ್ಲ ಅಕ್ರಮ ಮನೆಗಳನ್ನು ತೆರವುಗೊಳಿಸಿ, ಅವರಿಗೆ ಆಶ್ರಯ ಮನೆಗಳನ್ನು ಕೊಡಲು ಪಟ್ಟಿಯನ್ನೂ ಸಿದ್ಧಪಡಿಸಿದ್ದರು. ಆದಾಗ್ಯೂ, ಕೆಲ ರಾಜಕಾರಣಿಗಳ ಹಸ್ತಕ್ಷೇಪದಿಂದ ಅದಕ್ಕೆ ತಡೆ ಆಯಿತು. ಬಹುಮನಿ ಕೋಟೆಯಲ್ಲಿನ ಅಕ್ರಮ ಮನೆಗಳನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿಯೇ ಅಂಜುಂ ಪರವೇಜ್ ಅವರು ಕಲಬುರ್ಗಿ ಉತ್ಸವ ಹಮ್ಮಿಕೊಳ್ಳಲು ನಿರ್ಧರಿಸಿದ್ದರು. ಆಗಲೇ ಅವರನ್ನು ಎತ್ತಂಗಡಿ ಮಾಡಲಾಯಿತು.

ನಂತರ ಬಂದ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಅವರು ಅಕ್ರಮ ಮನೆಗಳ ತೆರವಿಗೆ ಕ್ರಮ ಕೈಗೊಂಡರಾದರೂ ಯಾವುದೇ ರೀತಿಯಲ್ಲಿ ಉಪಯೋಗ ಆಗಲಿಲ್ಲ. ಕೊನೆಗೆ ತೋಪಿನ ಕೆಳಗಡೆ ಪ್ರದೇಶದಲ್ಲಿ ಸುಂದರವಾದ ಉದ್ಯಾನವನ್ನು ಮಾತ್ರ ನಿರ್ಮಿಸುವಲ್ಲಿ ಯಶಸ್ವಿಯಾದರು.

ಇತ್ತೀಚೆಗೆ ಕುಮಾರಸ್ವಾಮಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಯು.ಟಿ. ಖಾದರ್ ಅವರು ಪಾಲಿಕೆಯಲ್ಲಿ ಸಭೆಯೊಂದನ್ನು ನಡೆಸಿ ಕೋಟೆಯಲ್ಲಿನ ಅಕ್ರಮ ಮನೆಗಳ ತೆರವಿಗೆ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದರು. ಈಗ ಆ ಸರ್ಕಾರವು ಬಿದ್ದು ಹೋಗಿದೆ. ಏನಿದ್ದರೂ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸಮತ ಪಡೆದ ಮೇಲೆಯೇ ಈ ಕುರಿತು ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here