ಕಲಬುರಗಿ: ಪ್ರತಿಯೊಂದು ಜೀವಿಯು ಜನಿಸಿ, ಬೆಳವಣಿಗೆ ಹೊಂದಿ, ತನ್ನ ಜೀವನವನ್ನು ಸಾಗಿಸಬೇಕಾದರೆ ಪರಿಸರ ಅಗತ್ಯವಾಗಿದೆ. ಆರೋಗ್ಯಗಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ವಿದ್ಯಾರ್ಥಿ ದೆಸೆಯಿಂದಲೆ ಪರಿಸರ, ಆರೋಗ್ಯ ಪ್ರಜ್ಞೆ ಮೈಗೂಡಿಸಿಕೊಂಡು, ಜಾಗೃತಿ ಮೂಡಿಸಬೇಕು ಎಂದು ಜೇವರ್ಗಿ ಸರ್ಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರವಿ ಕೋಳ್ಕೂರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಗುರುವಾರ ಏರ್ಪಡಿಲಾಗಿದ್ದ ’ವಿಶ್ವ ನೈಸರ್ಗಿಕ ಸಂರಕ್ಷಣೆ ಹಾಗೂ ಹೆಪಟೈಟಿಸ್ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶೇಷ ಉಪನ್ಯಾಸ ನೀಡಿದ ಪರಿಸರವಾದಿ ಸಿದ್ದು ಮಸ್ಕಿ, ಉತ್ತಮವಾದ ನಿಸರ್ಗ, ಪರಿಸರವಿದ್ದರೆ ಮಾತ್ರ ಎಲ್ಲಾ ಜೀವರಾಶಿಗಳು ಸದೃಢ ಮತ್ತು ದೀರ್ಘಕಾಲಿಕವಾಗಿ ಜೀವಿಸಲು ಸಾಧ್ಯವಾಗಿದೆ. ಪರಿಸರದ ಅಸಮತೋಲನೆಯೇ ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಮಾನವ ಪ್ರಕೃತಿ ವಿರುದ್ಧ ಹೋದರೆ ಅನಾಹುತ ತಪ್ಪಿದ್ದಲ್ಲವೆಂಬ ಸಂದೇಶ ನೀಡಿದೆ. ಎಲ್ಲೆಡೆ ಗಿಡಗಳನ್ನು ನೆಟ್ಟು ಪೋಷಿಸಬೇಕು. ಮಾಲಿನ್ಯ ಮುಕ್ತ ವಾತಾವರಣ ನಮ್ಮದಾಗಬೇಕು ಎಂದು ಆಶಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಂಬಾರಾಯ ತಂಗಾ ಮಾತನಾಡಿ, ವೈರಾಣುವಿರುವ ಕಲುಷಿತ ನೀರಿನ ಸೇವನೆ, ಸೋಂಕಿತ ವ್ಯಕ್ತಿಯ ಮಲ, ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ವೈರಾಣು ದೇಹವನ್ನು ಪ್ರವೇಶಿಸುತ್ತದೆ. ಸುಸ್ತು, ಹಸಿವಿಲ್ಲದಿರುವಿಕೆ, ಹೊಟ್ಟೆನೋವು, ವಾಕರಿಕೆ, ಗಾಡ ಬಣ್ಣದ ಮೂತ್ರ, ಮೈ-ಕೈ ನೋವು, ತೂಕ ಇಳಿಕೆ, ಚರ್ಮ ಮತ್ತು ಕಣ್ಣು ಹಳದಿ ಬಣ್ಣವಾಗುವುದು ಅಂದರೆ ಕಾಮಾಲೆ ರೋಗ ಇದರ ಪ್ರಮುಖ ಲಕ್ಷಣಗಳಾಗಿವೆ. ಶುದ್ಧ ಆಹಾರ ಮತ್ತು ನೀರಿನ ಸೇವನೆ, ವೈಯಕ್ತಿಕ ಸ್ವಚ್ಛತಗೆ ಹೆಚ್ಚಿನ ಗಮನವನ್ನು ನೀಡುವುದು, ಸೋಂಕಿತ ವ್ಯಕ್ತಿಯ ದೈಹಿಕ ಸಂಪರ್ಕ ಮಾಡದಿರುವುದು, ಮುನ್ನೆಚ್ಚರಿಕೆ ಕ್ರಮವಾಗಿ ರೋಗ ಬಾರದಂತೆ ತಡೆಯಲು ಹೆಪಟೈಟಿಸ್ ಲಸಿಕೆಗಳನ್ನು ಹಾಕುವುದು ತಡೆಗಟ್ಟುವ ವಿಧಾನಗಳಾಗಿವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹೆಪಟೈಟಿಸ್ ಖಾಯಿಲೆಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು.
ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಶರಣಯ್ಯ ಹಿರೇಮಠ ಅವರು ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಕಾಯಿಲೆಗಳ ಬಗ್ಗೆ ವಿವರಿಸಿದರು. ಪ್ರಾಚಾರ್ಯ ಮಹ್ಮದ್ ಅಲ್ಲಾಉದ್ದೀನ್ ಸಾಗರ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿದರು.
ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪೂರಕರ್, ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಪ್ರ.ದ.ಸ ನೇಸರ ಎಂ.ಬೀಳಗಿ, ಅತಿಥಿ ಉಪನ್ಯಾಸಕರಾದ ರಂಜಿತಾ ಠಾಕೂರ್, ದೇವೇಂದ್ರ ಬಡಿಗೇರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶೀಲವಂತಿ, ಭಾಗ್ಯಶ್ರೀ, ಕೀರ್ತನಾ ಪ್ರಾರ್ಥಿಸಿದರು. ಲಕ್ಷ್ಮೀ ಸ್ವಾಗತಿಸಿದರು. ಉಪನ್ಯಾಸಕ ಸಿದ್ದಾರೂಢ ಬಿರಾದಾರ ನಿರೂಪಿಸಿದರು. ಅಂಬಿಕಾ ವಂದಿಸಿದರು.