ಶಹಾಬಾದ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ೭೫ ನೇ ವರ್ಷದ ಹುಟ್ಟುಹಬ್ಬವನ್ನು ಆ. ೩ ರಂದು ದಾವಣಗೆರೆಯಲ್ಲಿ ’ಸಿದ್ಧರಾಮಯ್ಯ -೭೫ ಅಮೃತ ಮಹೋತ್ಸವ’ ಹೆಸರಲ್ಲಿ ಆಯೋಜಿಸಲಾಗಿದೆ. ಈ ಬೃಹತ್ ಸಮಾರಂಭಕ್ಕೆ ಕಲಬುರಗಿ ಜಿಲ್ಲೆಯಿಂದ ಅಭಿಮಾನಿಗಳು, ಸಮಾಜದ ಮುಖಂಡರು ಸಾವಿರಾರು ಜನ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಗೊಂಡ ಕುರುಬ ಸಂಘದ ತಾಲೂಕ ಅಧ್ಯಕ್ಷ ಸಾಯಬಣ್ಣ ಕೊಲ್ಲೂರ್ ಹೇಳಿದರು.
ಅವರು ನಗರದಲ್ಲಿ ಕುರುಬಗೊಂಡ ಸಂಘ ಮತ್ತು ಸಂಗೊಳ್ಳಿ ರಾಯಣ್ಣ ಯುವಕರ ಸಂಘ ವತಿಯಿಂದ ’ಸಿದ್ಧರಾಮಯ್ಯ -೭೫ ಅಮೃತ ಮಹೋತ್ಸವ’ ನಿಮಿತ್ತ ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಿದ್ಧರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರು. ಶೋಷಿತರ ಪರವಾಗಿ ಕೆಲಸ ಮಾಡಿದವರು. ಅನ್ನಭಾಗ್ಯ ನೀಡಿದವರು, ಇಂತಹ ವ್ಯಕ್ತಿಯ ಬಗ್ಗೆ ಅಭಿಮಾನವಿಟ್ಟು ಕಾಂಗ್ರೆಸ್ ಕಾರ್ಯಕರ್ತರು, ಜನಪ್ರತಿನಿಧಿಗಳು, ಬೆಂಬಲಿಗರು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚಿನ ಜನರು ಭಾಗವಹಿಸಬೇಕು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ತಾಲೂಕಾಧ್ಯಕ್ಷ ಸುನೀಲ ಪೂಜಾರಿ, ಅಶೋಕ ದೇವರಮನಿ, ಸುರೇಶ ಕುಂಟನ, ಮಂಜುನಾಥ ದೊಡ್ಡಮನಿ, ಬಸವರಾಜ ಮೂಡಬೂಳ, ಶಿವಾಜಿ ಧರೆಪ್ಪಗೋಳ, ವಿಜಯಕುಮಾರ ಕಂಠಿಕರ, ಶಿವುಕುಮಾರ ಶಂಕರವಾಡಿ, ಈಶ್ವರ ಕೊಡಚಿ ಇತರರು ಇದ್ದರು.