ಕಲಬುರಗಿ: ನಗರದ ಆಳಂದ ರಸ್ತೆಯ ಚೆಕ್ ಪೋಸ್ಟ್‌ನ ರಾಮತೀರ್ಥ ದೇವಸ್ಥಾನದ ಸಮೀಪದ ಕೊಳಗೇರಿ ಪ್ರದೇಶದಲ್ಲಿರುವ ಮಕ್ಕಳು, ಮಹಿಳೆಯರಿಗೆ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಹಾಲು, ಹಣ್ಣು ವಿತರಿಸಿ ಅರ್ಥಪೂರ್ಣವಾಗಿ ’ಬಸವ ಪಂಚಮಿ’ಯ ಆಚರಿಸಲಾಯಿತು.
ನಂತರ ಮಾತನಾಡಿದ ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ನಾಗರ ಪಂಚಮಿಯಂದು ಅಮೃತಕ್ಕೆ ಸಮನಾದ ಹಾಲು ಮತ್ತು ಆಹಾರವನ್ನು ಕಲ್ಲು, ಮಣ್ಣು ಪಾಲು ಮಾಡುವ ಸಂಪ್ರದಾಯವನ್ನು ಬಿಟ್ಟು, ಬಡ, ಅನಾಥ, ದುರ್ಬಲ ಮಕ್ಕಳಿಗೆ ಅವುಗಳನ್ನು ನೀಡುವ ಮೂಲಕ ಅವರಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಮಾತನಾಡಿ, ನಮ್ಮ ದೇಶದಲ್ಲಿ ಇಂದಿಗೂ ಕೂಡಾ ಅನೇಕ ಮಕ್ಕಳು ಅಪೌಷ್ಠಿಕತೆಯಿಂದ ಬಳಲಿ, ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲನ್ನು ಅನಾವಶ್ಯಕವಾಗಿ ಹಾಳು ಮಾಡಬಾರದು. ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಿದರೇ ಅದು ಹೆಚ್ಚಿನ ಮಹತ್ವ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಬಾಲ್ಯದಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಮೂಡಿಸಿದರೆ ಅವರು ಮುಂದೆ ದೊಡ್ಡವರಾದ ಮೇಲೆ ಆಚರಣೆ ಮಾಡಲಾರರು. ಆದ್ದರಿಂದ ಇದರ ಬಗ್ಗೆ ಎಲ್ಲೆಡೆ ಜಾಗೃತಿ ಉಂಟಾಗಬೇಕಾಗಿದೆ ಎಂದರು.
ಪ್ರಮುಖರಾದ ಸಿದ್ದರಾಮ ತಳವಾರ, ನರಸಪ್ಪ ಬಿರಾದಾರ ದೇಗಾಂವ, ಪರಮೇಶ್ವರ ಬಿ.ದೇಸಾಯಿ, ದೇವೇಂದ್ರಪ್ಪ ಗಣಮುಖಿ, ಸೋಮೇಶ ಡಿಗ್ಗಿ ಸೇರಿದಂತೆ ಮತ್ತಿತರರಿದ್ದರು.