ಕಲಬುರಗಿ,ಆ.16(ಕ.ವಾ) ಮನೆ ಬಾಗಿಲಿಗೆ ಸಾಮಾಜಿಕ ಭದ್ರತಾ ಪಿಂಚಣಿಯನ್ನು 72 ಗಂಟೆಯಲ್ಲಿ ನೀಡುವ ಬಗ್ಗೆ ಸಲಹೆ ನೀಡಿದಕ್ಕೆ ಕಂದಾಯ ಸಚಿವ ಆರ್.ಅಶೋಕ ಅವರು ಕಲಬುರಗಿ ಡಿ.ಸಿ.ಯಶವಂತ ವಿ. ಗುರುಕರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಫ್ಲಿಪ್ ಕಾರ್ಟ್ ಎಂಬ ಖಾಸಗಿ ದೈತ್ಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಯಶವಂತ ವಿ. ಗುರುಕರ್ ಅವರು ಸರ್ಕಾರಿ ವ್ಯವಸ್ಥೆಯಲ್ಲಿ ಕಾಲಮಿತಿಯಲ್ಲಿ ಪಿಂಚಣಿ ಒದಗಿಸಲು ಉದ್ದೇಶಿಸಿ ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಉದ್ದೇಶಿಸಿದರು.
ಈ ವಿಷಯ ಕಂದಾಯ ಸಚಿವರಿಗೆ ಗೊತ್ತಾಗಿದ್ದೆ ತಡ ಡಿ.ಸಿ. ಅವರನ್ನು ಸಂಪರ್ಕಿಸಿದ ಸಚಿವರು ಅಗತ್ಯ ಸಲಹೆ ಪಡೆದು ಕಲಬುರಗಿಯಷ್ಟೆ ಅಲ್ಲ ರಾಜ್ಯದಾದ್ಯಂತ ಇದನ್ನು ಜಾರಿಗೆ ತರೋಣ ಎಂದು ತಿಳಿಸಿ ಕಳೆದ ಮೇ 11ಕ್ಕೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸುವ ಮೂಲಕ ರಾಜ್ಯದಾದ್ಯಂತ ಈ ಯೋಜನೆ ಜಾರಿಗೊಳಿಸಿದ್ದರು.
ಸಾರ್ವಜನಿಕರು ಟೋಲ್ ಫ್ರೀ ಸಂ.155245 ಸಂಖ್ಯೆ ಕರೆ ಮಾಡಿ “ಹಲೋ ಕಂದಾಯ ಸಚಿವರೇ” ಕೇಂದ್ರಿಕೃತ ಸಹಾಯವಾಣಿಗೆ ಮಾಹಿತಿ ನೀಡಿದರೆ ಸಾಕು, ಗ್ರಾಮ ಲೆಕ್ಕಧಿಕಾರಿಗಳೇ ಪಿಂಚಣಿದಾರರ ಮನೆಗೆ ತೆರಳಿ ನವೋದಯ ತಂತ್ರಾಂಶದ ಮೂಲಕ ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳು ಪಡೆದು ಕಚೇರಿ ಕೆಲಸ ದಿನದ 72 ಗಂಟೆಯಲ್ಲಿ ಪಿಂಚಣಿ ಮಂಜೂರಾತಿ ನೀಡಲಾಗುತ್ತದೆ.