ಲಿಂಗಾಯತ ಸಮಾಜ ಬ್ರಾಹ್ಮಣ್ಯವನ್ನು ತಲೆಯ ಮೇಲೆ ಹೊತ್ತುಕೊಂಡು ಹೊರಟಿದೆ

0
19

ಶಹಾಪುರ : ೨೬ : ಮೌಢ್ಯಾಚಾರಣೆ, ಜಾತಿಯತೆ, ಅಂಧಕಾರದ ಆಚರಣೆಗಳನ್ನು ಅನುಸರಿಸುತ್ತ ಲಿಂಗಾಯತ ಸಮಾಜ ಬ್ರಾಹ್ಮಣ್ಯವನ್ನು ತಲೆಯ ಮೇಲೆ ಹೊತ್ತುಕೊಂಡು ಹೊರಟಿದೆ. ಶ್ರಾವಣ ಮಾಸ ವರ್ಷದಲ್ಲಿ ಕೇವಲ ಒಂದು ತಿಂಗಳು ಆಚರಿಸುವುದಲ್ಲ, ಪ್ರತಿ ನಿತ್ಯವೂ ವಚನ ಶ್ರವಣ ಮಾಡಬೇಕಾಗಿದೆ ಎಂದು ಪೂಜ್ಯ ಶ್ರೀ. ಸಿದ್ದಬಸವ ಕಬೀರ ಸ್ವಾಮೀಜಿ ಜಗದ್ಗುರು ಮರುಳಸಿದ್ದ ಪೀಠ ಚಿಗರಹಳ್ಳಿಯವರು ಮಾರ್ಮಿಕವಾಗಿ ನುಡಿದರು.

ನಗರದ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು- ೧೦೩ ರ ಕಾರ್ಯಕ್ರಮದಲ್ಲಿ ಶ್ರಾವಣ ಮಾಸದಲ್ಲಿ ಶರಣರ ಚಿಂತನೆಗಳು ಎಂಬ ವಿಷಯ ಕುರಿತು ಮಾತನಾಡುತ್ತ ಮುಂದುವರೆದು, ಅಂಧಾನುಕರಣೆಯ ಆಚರಣೆಗಳು ಲಿಂಗಾಯತ ಧರ್ಮದಲ್ಲಿ ಇಲ್ಲ. ದೇಹವೇ ದೇಗುವ ಶಿರವೆ ಹೊನ್ನ ಕಳಸವಾದ ಮೇಲೆ ಮಹಿಳೆಯರು ಮತ್ತೆ ಕಳಸವನ್ನು ಹೊತ್ತುಕೊಂಡು ಮೆರವಣಿಗೆ ಹೊರಡುವುದು ಲಿಂಗಾಯತ ಸಿದ್ಧಾಂತಕ್ಕೆ ವಿರುದ್ಧವಾದುದಾಗಿದೆ. ತನ್ನ ಅಕ್ಕನಾಗಲಾಂಬಿಕೆಯ ಹಕ್ಕಿಗಾಗಿ ಮನೆಯನ್ನೆ ತೊರೆದು ಬಂದ ಬಸವಣ್ಣ ಬ್ರಾಹ್ಮಣ್ಯದ ಬೇರುಗಳನ್ನು ನಡೆ ನುಡಿಗಳ ಮೂಲಕ ಕಿತ್ತು ಹಾಕಲು ಯತ್ನಿಸಿದರು.

Contact Your\'s Advertisement; 9902492681

ಎಲ್ಲಾ ಧರ್ಮಗಳು ದೇವರನ್ನು ಹುಡುಕಲು, ದೇವರ ಅನುಗ್ರಹವನ್ನು ಪಡೆಯಲು, ಮಾನಸಿಕ ನೆಮ್ಮದಿಗಾಗಿ ದೇವರು ಎಂಬ ಶಬ್ಧ ಭಾವದ ಹಿಂದೆ ಬೆನ್ನು ಬಿದ್ದರೆ ಲಿಂಗಾಯತ ಧರ್ಮವು ನಾವು ಕಲ್ಪಿಸಿದ ದೇವರುಗಳನ್ನು ಧಿಕ್ಕರಿಸಿ ನಾನೇ ದೇವರು ಎಂಬ ಅರಿವನ್ನು ಮೂಡಿಸಿದೆ. ಮಾದಾರ ಧೂಳಯ್ಯ ಶರಣರ ಮುಂದೆ ದೇವರು ಬಂದು ನಿಂತರೂ ಸಹ ಆ ದೇವರನ್ನೂ ಸಹ ಲಕ್ಷಿಸದೆ ತನ್ನ ಕಾಯಕದಲ್ಲಿ ನಿರತನಾಗಿ, ಆ ದೇವರಿಗೆ ’ಈಗ ಬಂದವನು ಬಂದಿರುವಿ. ಮುಂದೆ ಯಾವತ್ತೂ ಈ ಕಡೆ ಸುಳಿಯಬೇಡ’ ಎಂಬ ಎಚ್ಚರಿಕೆ ನೀಡುವುದು ಯಾವ ಧರ್ಮದಲ್ಲಾದರೂ ಇದೆಯಾ ? ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.

ಯಾವ ಧರ್ಮದಲ್ಲಿ ನಡೆ ಮತ್ತು ನುಡಿ ಇರುತ್ತದೋ ಅದು ಉತ್ಕೃಷ್ಠವಾದ ಧರ್ಮವಾಗುತ್ತದೆ. ನಡೆ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕ ಇರಲು ಸಾಧ್ಯವಿಲ್ಲ. ಮುಟ್ಟು ,ಮೈಲಿಗೆ,ಕೀಳು ಮೇಲು ಎಂಬ ಸಾಮಾಜಿಕ ಅನಿಷ್ಠಗಳು. ಕಡಕೋಳದ ಮಡಿವಾಳಪ್ಪ ಸೊಗಲಾಡಿ ಜನಗಳ ಜನ್ಮವನ್ನು ಜಾಲಾಡಲು ಮುಖ್ಯ ಕಾರಣವೇ ಪಟ್ಟಭದ್ರಶಕ್ತಿಗಳ ಕುತಂತ್ರ. ಪುರೋಹಿತ ಶಾಹಿಯ ಬೇರುಗಳನ್ನು ಹಿಡಿದು ಅಲ್ಲಾಡಿಸಬೇಕಾದ ಲಿಂಗಾಯತ ಜನಾಂಗ ಅವರಿಗೆ ಮಣೆ ಹಾಕುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದವರು ಬೇಸರ ವ್ಯಕ್ತಪಡಿಸಿದರು. ಹಸಿದವರಿಗೆ ಅನ್ನ ಕೊಡಬೇಕೆ ಹೊರತು, ಹೊಟ್ಟೆ ತುಂಬಿದವರಿಗೆ ಅನ್ನ ನೀಡಿ ಅವರನ್ನು ಜಂಗಮವೆನ್ನುವುದು ಸರಿಯಲ್ಲ ಎಂದವರು ಸಭೆಗೆ ತಿಳಿಸಿದರು.

ಸಭೆಯ ಅಥಿಗಳಾಗಿದ್ದ ಸಂಗಮೇಶ ಅನ್ವಾರ, ಮೂಲಾ ನಕ್ಷತ್ರದಲ್ಲಿ ಹುಟ್ಟಿದ ನನಗೆ ಯಾವ ಸಾಧನೆಯೂ ಮಾಡಲು ಸಾಧ್ಯವಿಲ್ಲ. ನಾನು ಹೆಜ್ಜೆ ಇಟ್ಟಲೆಲ್ಲ, ಅನಾಹುತವೆ ಆಗುತ್ತದೆಂದು ಪುರೋಹಿತರು ನನ್ನ ಕುಟುಂಬದವರಿಗೆ ನಂಬಿಸಿದ್ದರು. ಆದರೆ ನನ್ನ ಕನಸುಗಳು ಹಾಗೂ ಸತತ ಪ್ರಯತ್ನದ ಮೂಲಕ ಸುಳ್ಳಾಗಿಸಿದ್ದೇನೆ ಎಂದು ಸಭೆಗೆ ತಿಳಿಸಿದರು.

ಪ್ರಾಸ್ತಾವಿಕವಾಗಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಒಲೆ ಹತ್ತಿ ಉರಿದರೆ ಅದನ್ನು ಆರಿಸಲು ಬರುತ್ತದೆ. ಇಡಿ ಧರೆಗೆ ಧರೆಯೆ ಹತ್ತಿ ಉರಿಯುತ್ತಿದ್ದರೆ ಏನು ಮಾಡುವುದು ? ಇಂಥ ದುರಿತಕಾಲದಲ್ಲಿ ವಚನ ಸಾಹಿತ್ಯ ನಮಗೆ ಸಧರ್ಮದ ಮಾರ್ಗವನ್ನು ತೋರಿಸುತ್ತದೆ. ನಮ್ಮ ಮಕ್ಕಳು ನಮ್ಮ ಮಕ್ಕಳಾಗಿಯೆ ಉಳಿಯಬೇಕಾದರೆ ಅವರನ್ನು ಸದಾ ಕಣ್ಣಿಟ್ಟು ಕಾಯಬೇಕಾಗಿದೆ. ಮೊಬೈಲ್, ಹಾಗೂ ಸಮಾದಲ್ಲಿನ ಹಲವಾರು ವಿಕೃತ ನಡಾವಳಿಗಳಿಂದ ಅವರೆಲ್ಲ ದಾರಿ ತಪ್ಪಿದ ಮಕ್ಕಳಾಗುತ್ತಿದ್ದಾರೆ. ಮಕ್ಕಳ ಮನಸ್ಸನ್ನು ಸ್ವಚ್ಛವಾಗಿಡಲು ವಚನ ಸಾಹಿತ್ಯದ ಓದು, ಒಳ್ಳೆಯವರ ಜೊತೆಗಿನ ಒಡನಾಟ ಅನಿವಾರ್ಯವಾಗಿದೆ ಎಂದವರು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಡಿ.ದೇವರಾಜು ಅರಸು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಭೀಮಣ್ಣ ಮೇಟಿ ವಹಿಸಿದ್ದರು. ಸಾಕ್ಷಿ ಬಸವರಾಜ ಹುಣಸಗಿ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಮುದ್ನೂರ ಹಾಗೂ ಗುರಮ್ಮಗೌಡ್ತಿ ಅನ್ವಾರ ಅವರನ್ನು ಸತ್ಕರಿಸಲಾಯಿತು. ಡಾ.ಎಸ್.ಎಸ್. ನಾಯಕ ಸ್ವಾಗತಿಸಿದರು. ಸಭೆಯಲ್ಲಿ ಡಾ.ಭೀಮರಾಯ ಲಿಂಗೇರಿ, ಗುಂಡಣ್ಣ ಕಲಬುರ್ಗಿ, ದೇವಿಂದ್ರಪ್ಪ ಬಡಿಗೇರ, ಥಾಮಸ ದೊಡ್ಮನಿ, ಕೆಂಚಪ್ಪ ನಗನೂರು, ವೀರಣ್ಣ ಕಾಮಾ, ವಿಶ್ವನಾಥ ಅನ್ವಾರ, ಬಸವರಾಜ ಕೋರಿ, ಉಮೇಶ ಗೋಗಿ, ನಾನಾಗೌಡ ಬಿರಾದಾರ, ಶಿವಯೋಗಪ್ಪ ಹವಾಲ್ದಾರ, ಚಂದ್ರಶೇಖರ ಹವಾಲ್ದಾರ, ಮಲ್ಲಣ್ಣ ಹೊಸ್ಮನಿ, ಶಿವಕುಮಾರ ಆವಂಟಿ, ಗುರಲಿಂಗಪ್ಪ ಸರಶೆಟ್ಟಿ, ಹಣಮಂತ ಗುರಿಕಾರ ಮೊದಲಾದವರು ಭಾಗವಹಿಸಿದ್ದರು. ಕೊನೆಯಲ್ಲಿ ಪಂಪಣ್ಣಗೌಡ ಮಾಲಿ ಪಾಟೀಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here