ಬಿಸಿಎಂ ವಸತಿ ನಿಲಯಗಳಲ್ಲಿ ಹಳಸಿದ ಊಟ ವಿರೋಧಿಸಿ ವಿದ್ಯಾರ್ಥಿಗಳ ಧರಣಿ

0
96

ಕಲಬುರಗಿ: ಬಿಸಿಎಂ ವಸತಿ ನಿಲಯಗಳಲ್ಲಿ ನೀಡಲಾಗುತ್ತಿರುವ ಹಳಸಿದ ಊಟದ ಬದಲು ಗುಣಮಟ್ಟದ ಊಟವನ್ನು ಕೊಡುವಂತೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಬುಧವಾರ ಭಾರತೀಯ ದಲಿತ ಪ್ಯಾಂಥರ್ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಮುಂದೆ ಧರಣಿ ಹಮ್ಮಿಕೊಂಡಿದ್ದರು.

ಒಕ್ಕೂಟದ ಜಿಲ್ಲಾಧ್ಯಕ್ಷ ದಿನೇಶ್ ಮೋಘಾ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಗಂಗಾಧರ್ ಮಾಡಬೂಳ್, ರಮೇಶ್ ಚಿಮ್ಮಾಯಿದ್ಲಾಯಿ, ನವೀನ್ ಕುಮಸಿ, ಅಮರ್ ಗೋಟೂರ್, ಸೋಮು ಸಣ್ಣೂರ್, ಶರಣು ಉಡಗಿ, ಗುರುನಾಥ್ ಹೊಸಮನಿ, ರವಿ ಕುಳಗೇರಿ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರವು ವಸತಿ ನಿಲಯಗಳಿಗೆ ಅನೇಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದರೂ ಸಹ ಬಿಸಿಎಂ ವಸತಿ ನಿಲಯಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಲ್ಲಿ ಅನೇಕ ಸಮಸ್ಯೆಗಳಿವೆ. ರಾತ್ರಿ ಮತ್ತು ಮಧ್ಯಾಹ್ನದ ಊಟ ಉತ್ತಮವಾಗಿಲ್ಲ. ಕೆಲವೊಂದು ವಸತಿ ನಿಲಯಗಳಲ್ಲಿ ರಾತ್ರಿ ಉಳಿದ ಆಹಾರವನ್ನು ಮರುದಿನ ಬೆಳಿಗ್ಗೆ ಕೊಡುತ್ತಾರೆ. ಈ ಕುರಿತು ಮೇಲ್ವಿಚಾರಕರನ್ನು ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹೊರಗಡೆ ಏನಾದರೂ ಈ ಕುರಿತು ಹೇಳಿದರೆ ವಸತಿ ನಿಲಯದಿಂದ ಹೊರಹಾಕುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೂಡಲೇ ಬಿಸಿಎಂ ವಸತಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ನಿರ್ಲಕ್ಷ್ಯಸಿದ ಮೇಲ್ವಿಚಾರಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here