ಸಿರಿಗೆರೆಯ ಪಂಡಿತಾರಾಧ್ಯ ಶಿವಾಚಾರ‍್ಯ ಸ್ವಾಮೀಜಿಗಳ ಕರ್ಣಧಾರತ್ವದಲ್ಲಿ ಆರಂಭಗೊಳ್ಳುತ್ತಿರುವ ‘ಮತ್ತೆ ಕಲ್ಯಾಣ’ ಎಂಬ ಅಭಿಯಾನಕ್ಕೆ ಅಭೂತಪೂರ್ವವಾದ ಸ್ವಾಗತ ದೊರಕಿದೆ. ಅಲ್ಲಲ್ಲಿ ಕೆಲವರು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಅಪಸ್ವರದ ಧ್ವನಿಗಳನ್ನೂ ಸಹ ಗಮನಿಸಿ, ತಿದ್ದು ಪಡಿ ಮಾಡಿಕೊಂಡು ರಾಜ್ಯದಾದ್ಯಂತ ಹೊರಡುವ ತಯಾರಿಯಲ್ಲಿ ಮತ್ತೆ ಕಲ್ಯಾಣ ಬಳಗ ಸಜ್ಜಾಗಿದೆ. ನಾಳೆ ದಿನ ಮಂಗಳೂರಿನಲ್ಲಿ ಸಮಾವೇಶಗೊಳ್ಳಲಿರುವ ಮತ್ತೆ ಕಲ್ಯಾಣ ಕಾರ‍್ಯಕ್ರಮಕ್ಕೆ ಮೂಡಬಿದರೆಯ ಮೋಹನ ಆಳ್ವಾ ಭಾಗವಹಿಸುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಮೇಲ್ನೋಟದಲ್ಲಿ ಮೋಹನ ಆಳ್ವಾ ಅವರ ಭಾಗವಹಿಸುವಿಕೆಯನ್ನು ನಾನೂ ವಿರೋಧಿಸುತ್ತೇನೆ.
ಆದರೆ ಬಸವಾದಿ ಶರಣರ ವಿಚಾರಗಳ ಹಿನ್ನೆಯಲ್ಲಿ ಮೋಹನ್ ಆಳ್ವಾರನ್ನು ದೂರ ಸರಿಸಿ ಕಾರ‍್ಯಕ್ರಮ ಮಾಡುವುದು ಎಷ್ಟು ಸರಿ ? ಎಂಬ ಕುರಿತು ನಮ್ಮೊಳಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ನಾವು ನೀವೆಲ್ಲ ಬಲ್ಲಂತೆ ಮೋಹನ್ ಆಳ್ವಾ ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿಕೊಂಡು ಜೀವಿಸುತ್ತಿರುವ ಒಬ್ಬ ವ್ಯಕ್ತಿ. ಈ ವ್ಯಕ್ತಿಯೂ ಹಿಂದೊಂದು ಸಂದರ್ಭದಲ್ಲಿ ಎಡ ಪಂಥದ ಚಿಂತನೆಗಳಿಗಾಗಿ ಬೀದಿ ಬೀದಿ ಅಲೆದು ನಾಟಕಗಳನ್ನು ಮಾಡುತ್ತಿದ್ದ ಎಂಬುದನ್ನು ನಾವು ಯಾರೂ ಮರೆಯಬಾರದು. ಅಲ್ಲದೆ ಯಾವುದೋ ಒಬ್ಬ ವ್ಯಕ್ತಿಯನ್ನು ಕೇವಲ ಆತನ ಒಂದೇ ಒಂದು ಗುಣವನ್ನು ನೋಡಿ ಹೀಗಳೆಯುವುದು ತಪ್ಪೆಂದು ನನ್ನ ಭಾವನೆ.
ಸಂಗದ ಫಲದಿಂದ ವ್ಯಕ್ತಿ ಕೆಟ್ಟವನೂ ಒಳ್ಳೆಯವನೂ ಆಗುವ ಸಾಧ್ಯತೆ ಇದೆ. ಸಂಗದ ಫಲದಿಂದ ‘ಕೀಡೆ ಕುಂಡಲಿಯಾಗದೆ ?’ ಎನ್ನುವಂತೆ ಕೆಟ್ಟ ಪರಂಪರೆಯನ್ನು ನಂಬಿ ಹೊರಟ ವ್ಯಕ್ತಿ ಬದಲಾಗಬಾರದು ಎಂದೆನೂ ಇಲ್ಲವಲ್ಲ.”ಅಯ್ಯಾ ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತು. ಎನ್ನ ಮನ ಶುದ್ಧವಾಯಿತ್ತು” ಎಂಬ ಅಕ್ಕಮಹಾದೇವಿಯ ವಚನದಂತೆ ಪರಿವರ್ತನೆಗೆ ಒಂದು ಅವಕಾಶ ಕೊಟ್ಟು ನೋಡಬಾರದೇಕೆ ?
“ಇವನಾರವ ಇವನಾರವ ಇವನಾರವ ಎನ್ನದಿರಯ್ಯ
ಇವ ನಮ್ಮವ ಇವ ನಮ್ಮವ, ಇವ ನಮ್ಮ ಮನೆಯ ಮಗನೆಂದೆನಿಸಯ್ಯಾ”
ಎಂದು ಬಸವಣ್ಣನವರು ಹೇಳಿರುವಾಗ ಅವರು ಬೇಡ ಇವರು ಬೇಡ ಎಂದು ದೂರಿಕರಿಸುತ್ತ ಹೋದರೆ ಉಳಿಯುವವರು ಯಾರು ? ಬಸವಣ್ಣನವರ ಮನೆಗೆ ಕಳ್ಳನೊಬ್ಬ ಬಂದಾಗ ಆತನನ್ನು ಸಂಗಮನಾಥನೆಂದು ಬಗೆದರು. ಆಗ ಆತ ಒಬ್ಬ ಶರಣನಾದ ಘಟನೆ ನಮ್ಮೆಲ್ಲರ ಅರಿವಿಗೆ ಇದೆ. ಜ್ಞಾನವನ್ನು ಕೊಡದೆ ಅಜ್ಞಾನದ ವ್ಯಕ್ತಿಯನ್ನು ದೂರುವುದು ಎಷ್ಟು ಸರಿ ? ಹಾಗೆ ನೋಡಿದರೆ ಮೋಹನ ಆಳ್ವಾ ಕೂಡ ಸುಖದ ಸುಪ್ಪತ್ತಿಗೆಯ ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದವರೇನಲ್ಲ. ದುಡಿಮೆಯೆ ಬದುಕು ಎಂದು ನಂಬಿಕೊಂಡು ಬಂದವರು. ತಮ್ಮ ಸಭ್ಯ ಸರಳ, ಮತ್ತು ಸಮಯ ಪ್ರಜ್ಞೆಯ ಗುಣಗಳಿಂದ ಬಹುದೊಡ್ಡ ಸಂಸ್ಥೆಯೊಂದನ್ನು ಕಟ್ಟಿದವರು. ನಡೆಯುವ ಮನುಷ್ಯ ಬೀಳುವುದು ಸಹಜ. ಮೋಹನ್ ಆಳ್ವಾರೂ ಕೂಡ ಹಲವಾರು ಸಲ ಎಡವಿ ಬಿದ್ದಿರಬಹುದು. ಬೀಳುತ್ತಲೂ ಇರಬಹುದು. ಬಸವ ತತ್ವ ಬಿದ್ದವರ ಮೇಲೆತ್ತುವ ಧರ್ಮವಲ್ಲವೆ ?
ಎಡ ಪಂಥೀಯ ಚಿಂತಕರೆಂದು ನಾವೆಲ್ಲ ದೂರ ಸರಿದಾಗ ಸಹಜವಾಗಿ ಇಂಥ ವ್ಯಕ್ತಿಗಳ ಸುತ್ತ ಸ್ವಾರ್ಥ ಸಾಧಕರು ತುಂಬಿಕೊಳ್ಳುತ್ತಾರೆ. ವಿವೇಕರಹಿತರು ತಮ್ಮ ಬೇಳೆ ಬೇಯಿಸುವುದಕ್ಕಾಗಿ ಗಾಳಿ ಹಾಕುತ್ತಾರೆ. ಸಹಜವಾಗಿಯೆ ಅವರದೆ ಒಂದು ಪಟಾಲಂ ಸಿದ್ಧಗೊಳ್ಳುತ್ತದೆ.
ಎಂಥ ಮನುಷ್ಯನನ್ನು ಬದಲಾಯಿಸುವ ತಾಕತ್ತು ಬಸವಾದಿ ಶರಣರ ವಚನಗಳಲ್ಲಿ ಇದೆ ಎಂಬುದನ್ನು ನಾವು ಮರೆಯಬಾರದು. ಎಲವೋ ಎಲವೋ ಪಾಪ ಕರ್ಮವ ಮಾಡಿದವನೆ. ಎಲವೋ ಎಲವೋ ಬ್ರಹ್ಮ ಹತ್ಯೆವ ಮಾಡಿದವನೆ ಒಮ್ಮೆ ಶರಣೆನ್ನೆಲವೋ ! ಎಂಬ ಮಾತು ಸಾಕು ಅನಿಸುತ್ತದೆ. ಬಸವಣ್ಣವರು ಅಂದು ಎಲ್ಲರ ಗುಣಗಳನ್ನು ನೋಡಿಕೊಂಡು ಚಳುವಳಿ ಕಟ್ಟಿದ್ದರೆ ? ಎಲ್ಲರೂ ಸರಿಯಾಗಿಯೆ ಇದ್ದ ಮೇಲೆ ಬಸವಣ್ಣವರ ಅಗತ್ಯವಾದರೂ ಏನಿತ್ತು ? ಮಾದಾರ ಚೆನ್ನಯ್ಯಾ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಹೊಲಿಯರ ನಾಗಿದೇವ, ಸೂಳೆ ಸಂಕವ್ವೆಯರನ್ನೂ ತನ್ನ ಚಳುವಳಿಗೆ ಕರೆದುಕೊಂಡ ಬಗೆಯನ್ನು ನಾವು ಗಂಭೀರವಾಗಿ ಅಧ್ಯಯನ ಮಾಡಬೇಕು. ಸಂಕವ್ವೆಯಂತಹ ಸಾಮಾನ್ಯ ಹೆಣ್ಣು ಮಗಳು ತನ್ನ ಹಿಂದಿನ ಕಸುಬನ್ನು ಬಿಟ್ಟು ಶರಣೆಯಾದ ಸಂಗತಿ ನಮಗೆಲ್ಲ ಮನದಟ್ಟಾಗಿರುವಂಥದ್ದೆ.
ಮತ್ತೆ ಕಲ್ಯಾಣದ ರೂವಾರಿಗಳಾದ ಪೂಜ್ಯ ಶ್ರೀ. ಪಂಡಿತಾರಾಧ್ಯ ಶಿವಾಚಾರ‍್ಯ ಸ್ವಾಮೀಜಿಗಳು ಎಲ್ಲ ಮಠಾಧೀಶರಂತ್ತಲ್ಲ. ಅವರ ಬರವಣಿಗೆ , ಬದುಕು ಸ್ಪಟಿಕದ ಶಲಾಕೆಯಂತೆ ಸ್ಪಷ್ಟ. ನೇರ ನಿಷ್ಠುರ ಗುಣಗಳನ್ನು ಬೆಳೆಸಿಕೊಂಡು ಜೀವನ ಸಾಗಿಸಿದವರು. ೨೦೦೨ ರ ಮಂಗಳೂರಿನ ಮಲೆಬೆನ್ನೂರು ಎಂಬಲ್ಲಿ ಪ್ರಮೋದ ಮುಲಾಲಿಕ ಹಿಂದುತ್ವವಾದದ ಅಮಲು ತುಂಬುತ್ತಿರುವಾಗ ಸಭೆಯಲ್ಲಿಯೆ ಅದನ್ನು ಖಂಡಿಸಿದವರು. ತೀರಾ ಇತ್ತೀಚೆಗೆ ನಮ್ಮ ರಾಜ್ಯದ ಮಾಜಿ ಉಪ ಮುಖ್ಯ ಮಂತ್ರಿ ಪರಮೇಶ್ವರರ ಎದುರಾ ಎದುರೆ ತರಾಟೆಗೆ ತೆಗೆದುಕೊಂಡು ಸರಿಯಾದ ರಾಜನೀತಿಯನ್ನು ಬೋಧಿಸಿದವರು. ವಿದೇಶದಲ್ಲಿ ಹೋಗಿ ವೀಣಾ ಬನ್ನಂಜೆ ಹಾಗೂ ಸೂಲಿಬೆಲಿ ಚಕ್ರವರ್ತಿಳು ಏನೇನೋ ಗಳುಪುತ್ತಿದ್ದಾಗ ಅದೇ ವೇದಿಕೆಯ ಮೇಲೆಯೆ ಅವರಿಗೆ ಹಾಗೂ ಅಲ್ಲಿನ ನಾಗರಿಕರಿಗೆ ಸರಿಯಾದ ಉತ್ತರಕೊಟ್ಟು ಬಂದವರು. ಹೀಗಾಗಿ ಪಂಡಿತಾರಾಧ್ಯ ಶಿವಾಚಾರ‍್ಯ ಸ್ವಾಮಿಗಳು, ಮೋಹನ್ ಆಳ್ವಾ ಏನೇನೋ ಅಕಳಾಸಕಳಾ ಮಾತಾಡಿದರೆ ಸುಮ್ಮನೆ ಕೂಡಲು ಸಾಧ್ಯವೆ ಇಲ್ಲ ಎಂಬುದು ನನ್ನ ನಂಬುಗೆ. ಮೋಹನ್ ಆಳ್ವಾ ವಚನ ಸಾಹಿತ್ಯದ ಮೂಲ ಆಶಯ ಅರಿತುಕೊಳ್ಳಲಿ. ಸತ್ಯವನ್ನು ಅರಿತುಕೊಂಡು , ಅರಿವನ್ನು ತಮ್ಮ ಗುರುವನ್ನಾಗಿಸಿಕೊಳ್ಳಲಿ ಎಂಬ ಸದಾಶಯಗಳನ್ನು ನಾವೆಲ್ಲ ಹಾರೈಸೋಣ.