ಸುರಪುರ:ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ನಡೆಯುವ ಧಮ್ಮ ವಂದನಾ ಕಾರ್ಯಕ್ರಮವನ್ನು ಶನಿವಾರ ಆಚರಿಸಲಾಯಿತು.ಈ ತಿಂಗಳ ಕಾರ್ಯಕ್ರಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಸರಕಾರ ದಿಂದ ಉತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿ ಪಡೆದ ಡಾ:ಆರ್.ವಿ ನಾಯಕ ಹಾಗೂ ಉದ್ಯಮಿ ಗ್ಯಾನ್‌ಚಂದ್ ಜೈನ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಅವರು ಮಾತನಾಡಿ,ಪ್ರತಿ ತಿಂಗಳು ಇಂತಹ ಒಂದು ಅದ್ಭುತವಾದ ಕಾರ್ಯಕ್ರಮ ಮಾಡುವುದರ ಮೂಲಕ ಮಹಾತ್ಮ ಗೌತಮ್ ಬುದ್ಧರನ್ನು ಸ್ಮರಿಸುವ ಜೊತೆಗೆ ಡಾ:ಬಾಬಾ ಸಾಹೇಬರ ವಿಚಾರಗಳ ಮಂಥನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ನನಗೆ ಇಂದು ರಾಜ್ಯ ಸರಕಾರದ ಉತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿ ದೊರೆಯಲು ಡಾ:ಬಾಬಾ ಸಾಹೇಬ ಅಂಬೇಡ್ಕರರು ಕಾರಣ ಎನ್ನಲು ಸಂತೋಷವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ವರಜ್ಯೋತಿ ಬಂತೇಜಿ ಮಾತನಾಡಿ,ಈ ದೇಶದಲ್ಲಿ ಮಹಾತ್ಮ ಗೌತಮ್ ಬುದ್ಧ ಮತ್ತು ಮಹಾವೀರರ ಸಂದೇಶಗಳು ಸಮಾಜದಲ್ಲಿ ಶಾಂತಿ ಕರುಣೆ ಮೈತ್ರಿ ಮೂಡಿಸಲು ಅವಶ್ಯವಾಗಿವೆ ಎಂದರು.ಬುದ್ಧ ರೂಪದಲ್ಲಿಲ್ಲ ಬುದ್ಧ ಜನರ ಪ್ರೀತಿ,ಕರುಣೆ,ಮೈತ್ರಿಯ ಪ್ರತಿ ರೂಪವಾಗಿದ್ದಾನೆ ಎಂದರು.ನನಗೆ ಕಾವಿ ಕೊಟ್ಟಿದ್ದು ಡಾ:ಬಾಬಾ ಸಾಹೇಬ ಅಂಬೇಡ್ಕರ್ ಅವರು ಬುದ್ಧ ಧರ್ಮ ಸ್ವೀಕರಿಸಿದ್ದರಿಂದ ನಾನು ಸ್ವೀಕರಿಸಿದ್ಧೇನೆ ಎಂದರು.
ಇದೇ ಸಂದರ್ಭದಲ್ಲಿ ಅಬಕಾರಿ ಉಪ ನಿರೀಕ್ಷಕಿ ಪೂಜಾ ಖರ್ಗೆ ಮಾತನಾಡಿ,ನಾವೆಲ್ಲರು ಕೇವಲ ಹೇಳಿಕೊಳ್ಳಲು ಬೌಧ್ಧರಾದರೆ ಸಾಲದು ನಾವೆಲ್ಲರು ಬೌಧ್ಧ ಧರ್ಮದ ತ್ರಿಸರಣ,ಪಂಚಶೀಲ,ಧಮ್ಮ ವಂದನೆಗಳನ್ನು ತಿಳಿದುಕೊಳ್ಳಬೇಕು.ಡಾ:ಬಾಬಾ ಸಾಹೇಬ್ ಅಂಬೇಡ್ಕರರು ನಮಗಾಗಿ ಕೊಟ್ಟು ಹೋಗಿರುವ ಸಂದೇಶವನ್ನು ನಾವೆಲ್ಲರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ವರಜ್ಯೋತಿ ಬಂತೇಜಿಯವರು ತ್ರಿಸರಣ ಪಂಚಶೀಲ ಪಠಣವನ್ನು ನಡೆಸಿದರು.ನಂತರ ಡಾ:ಆರ್.ವಿ ನಾಯಕ,ಉದ್ಯಮಿ ಗ್ಯಾನಚಂದ್ ಜೈನ್ ಹಾಗೂ ಕಾರ್ಯಕ್ರಮದ ಭೋಜನದಾನಿಗಳಾದ ಗುರುಪಾದಪ್ಪ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಅಕ್ಟೋಬರ್ ೧೪ರ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ,ಉಪಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ,ಭೀಮರಾಯ ಸಿಂದಗೇರಿ,ವೆಂಕಟೇಶ ಸುರಪುರ ವೇದಿಕೆಯಲ್ಲಿದ್ದರು.ರಾಹುಲ ಹುಲಿಮನಿ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಿಸಿದರು,ಭೀಮರಾಯ ಸಿಂದಗೇರಿ ವಂದಿಸಿದರು.ಕಾರ್ಯಕ್ರಮದಲ್ಲಿ ಅನೇಕ ಜನ ಉಪಾಸಕ ಉಪಾಸಕಿಯರು ಭಾಗವಹಿಸಿದ್ದರು.