ಕಲಬುರಗಿ: ಇಲ್ಲಿಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಪತ್ರಿಕಾ ಭವನದ ಮುಂದುವರೆದ ಭಾಗವಾಗಿ ಆಧುನಿಕರಣಕ್ಕೆ ಸಂಸದ ಡಾ.ಉಮೇಶ ಜಾಧವ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಕಳೆದ ಜುಲೈ ೩೧ ರಂದು ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಾ.ಉಮೇಶ ಜಾಧವ ಅವರು, ಪತ್ರಿಕಾ ಭವನ ಆಧುನಿಕರಣಕ್ಕೆ ೧೦ ರಿಂದ ೧೫ ಲಕ್ಷ ರೂ.ಗಳು ಅನುದಾನ ನೀಡುವುದಾಗಿ ಭರವಸೆ ಕೊಟ್ಟಿರುವಂತೆ ಇಂದು ಪತ್ರಿಕಾ ಭವನದಲ್ಲಿ ಮನವಿ ಪತ್ರ ಸ್ವೀಕರಿಸಿ ಅನುದಾನ ಮಂಜೂರಾತಿ ಮಾಡಿಕೊಡುವುದಾಗಿ ಹೇಳಿದರು.
ಪತ್ರಿಕಾ ಭವನದ ಮೇಲ್ಭಾಗದಲ್ಲಿರುವ ಸಭಾಂಗಣದಲ್ಲಿ ಪೀಠೋಪಕರಣ, ಧ್ವನಿವರ್ಧಕ, ಪಿಓಪಿ ಮುಂತಾದ ಆಧುನಿಕರಣಗೊಳಿಸುವ ನಿಟ್ಟಿನಲ್ಲಿ ಅನುದಾನದ ಅಗತ್ಯತೆ ಮನಗಂಡು ಸಂಸದರಿಗೆ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಕೆಕೆಆರ್‌ಡಿಬಿ ಅಧ್ಯಕ್ಷರೂ ಹಾಗೂ ದಕ್ಷಿಣ ಮತ್ರಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡ ಚಂದ್ರಶೇಖರ ಪರಸರಡ್ಡಿ ಸಮ್ಮುಖದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ರಾಜ್ಯ ಸಮಿತಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ, ಉಪಾಧ್ಯಕ್ಷ ರಾಮಕೃಷ್ಣ ಬಡಶೇಷಿ, ಕಾರ್ಯದರ್ಶಿ ಅರುಣಕುಮಾರ ಕದಮ ಸೇರಿದಂತೆ ಹಿರಿಯ-ಕಿರಿಯ ಪತ್ರಕರ್ತ ಮಿತ್ರರು ಹಾಜರಿದ್ದರು.