ಶಹಾಬಾದ:ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ 5 ತಿಂಗಳ ಬಾಕಿ ವೇತನ ಬಿಡುಗಡೆ ಮತ್ತು ವೇತನ ಹೆಚ್ಚಳವಾದ ಬಾಕಿ ಹಣ ಬಿಡುಗಡೆ, ಗ್ಯಾಸ್ ಸಿಲಿಂಡರ್ ಪೂರೈಕೆ, ತರಕಾರಿ ಬಿಲ್ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ಮಾಡಲಾಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ತಾಲೂಕಾಧ್ಯಕ್ಷೆ ಸಾಬಮ್ಮ.ಎಮ್. ಕಾಳಗಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಹಾಬಾದ ವಲಯದಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸುಮಾರು 5 ತಿಂಗಳಿಂದ ವೇತನ ಜಮೆಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಮಕ್ಕಳ ಕಲಿಕೆಗೆ ಹಣ ಇಲ್ಲದೆ ಶಾಲೆ ಬಿಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ 5 ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಬಾಕಿ ವೇತನ ಬಿಡುಗಡೆ ಮಾಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವೇತನದ ಬಿಲ್ ದಾಖಲೆಗಳನ್ನು ಕಳುಹಿಸಲಾಗಿದೆ. ಆದರೆ ನಮ್ಮ ಇಲಾಖೆಯಿಂದ ವಿಳಂಬವಾಗಿಲ್ಲ. ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಳುತ್ತಾರೆ. ಇದರಿಂದ ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುವುದನ್ನು ಬಿಟ್ಟು ಕಾರ್ಯಕರ್ತೆಯರ ವೇತನ ಬಿಡುಗಡೆ ಮಾಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾಬಮ್ಮ ಆಗ್ರಹಿಸಿದರು.
ಕಾರ್ಯಕರ್ತೆಯರಿಗೆ ಈಗಾಗಲೇ ವೇತನ ಹೆಚ್ಚಳವಾಗಿದೆ. ಅದರಿಂದ ಹೆಚ್ಚಳವಾದ ಹಣ ಕೂಡಾ ಬಿಡುಗಡೆ ಮಾಡಿಲ್ಲ. ಗ್ಯಾಸ್ ಸಿಲಿಂಡರ್ ಎರಡು ತಿಂಗಳಿಂದ ಪೂರೈಕೆ ಮಾಡಿಲ್ಲ. ಇದರಿಂದ ಸಾಲ ಮಾಡಿ ಸಿಲೆಂಡರ್ ಖರೀದಿಸಿ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಇದರಿಂದ ಗ್ಯಾಸ್ ಸಿಲಿಂಡರ್ ಪೂರೈಕೆ ಮತ್ತು ಸಿಲಿಂಡರ್ ಖರೀದಿಸಿದ ಹಣ ಜಮೆ ಮಾಡಬೇಕು. ಹಾಗೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಮವಸ್ತ್ರ ವಿತರಿಸಬೇಕು. ತರಕಾರಿ ಬಿಲ್ ಪಾವುತಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಕೂಡಲೇ ಪರಿಹಾರ ಮಾಡಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಎಂದು ಕಾರ್ಯಕರ್ತೆಯರು ಅಧಿಕಾರಿಗಳಿಗೆ ಖಡಕ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಯಕರ್ತೆಯರಾದ ಬಾಲಮ್ಮ, ಶಾಂತಾ ಹೀರೆಮಠ, ಲಕ್ಷ್ಮಿ ಜಾಧವ, ಸುವರ್ಣ, ಲಕ್ಷ್ಮಿ ರಾಡಿಪಟ್ಟಿ, ಶೈನಾಜ್, ನೇತ್ರಾವತಿ, ಐನಾಮತಿ, ಶಿವುಬಾಯಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಶಹಾಬಾದ ಸಂಚಾಲಕ ರಾಯಪ್ಪ ಹುರುಮುಂಜಿ, ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್ ಭಾಗವಹಿಸಿದ್ದರು.