ಕಲಬುರಗಿ-ಕೊಲ್ಲಾಪೂರ ನೂತನ ಎಕ್ಸ್‍ಪ್ರೆಸ್ ರೈಲಿಗೆ ಚಾಲನೆ

0
175

ಕಲಬುರಗಿ: ಕಲಬುರಗಿ-ಶ್ರೀ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ ನಡುವಿನ ನೂತನ ಚೇರ್‍ಕಾರ್ ಎಕ್ಸ್‍ಪ್ರೆಸ್ (ಸಿಟ್ಟಿಂಗ್) ರೈಲಿಗೆ ಶನಿವಾರ ಚಾಲನೆ ನೀಡಲಾಯಿತು.

ಕೇಂದ್ರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳಿಯಿಂದ ವರ್ತುವಲ್ ವೇದಿಕೆ ಮೂಲಕ ಸೋಲಾಪುರ-ಮಿರಾಜ್ ಎಕ್ಸ್‍ಪ್ರೆಸ್ ಈ ರೈಲನ್ನು ಕಲಬುರಗಿ-ಕೊಲ್ಲಾಪೂರ ವಿಸ್ತರಣೆಯ ಆರಂಭಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

Contact Your\'s Advertisement; 9902492681

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ 1ರಲ್ಲಿ ನೂತನ ರೈಲಿನ ಆರಂಭಿಕ ಸಂಚಾರದ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಸಂಸದ ಡಾ.ಉಮೇಶ ಜಾಧವ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಸ್ಥಳೀಯವಾಗಿ ಹಸಿರು ನಿಶಾನೆ ತೋರಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ, 2014ರ ನಂತರ ಹೊಸ ರೈಲ್ವೆ ಲೈನ್, ಡಬ್ಲಿಂಗ್, ವಿದ್ಯುದ್ದೀಕರಣ ಕಾರ್ಯದಲ್ಲಿ ದಾಖಲೆ ನಿರ್ಮಿಸಲಾಗಿದೆ. 2007-14ರ ಅವಧಿಯಲ್ಲಿ 4,337 ಕಿ.ಮೀ ಎಲೆಕ್ಟ್ರಿಫಿಕೇಷನ್ ಆಗಿದ್ದರೆ, 2014-22ರ ಅವಧಿಯಲ್ಲಿ 30,446 ಕಿ.ಮೀ. ವಿದ್ಯುತ್ ಲೈನ್ ಕಾಮಗಾರಿ ಮಾಡಲಾಗಿದೆ. ಕೋವಿಡ್ ನಂತರ 2021-22 ವರ್ಷದಲ್ಲಿಯೇ 6,366 ಕಿ.ಮೀ. ಪೂರ್ಣಗೊಳಿಸಿದೆ. ಅದೇ ರೀತಿ ಹಿಂದಿನ ಸರ್ಕಾರದ ಅವಧಿಯ 7 ವರ್ಷದಲ್ಲಿ 2,700 ಕಿ.ಮಿ. ಡಬ್ಲಿಂಗ್ ಕಾರ್ಯವಾಗಿದ್ದರೆ, ನಮ್ಮ ಸರ್ಕಾರದ ಇಷ್ಟೆ ಅವಧಿಯಲ್ಲಿ 12,000 ಕಿ.ಮಿ. ಹಳಿ ಡಬ್ಲಿಂಗ್ ಮಾಡಿದ್ದೇವೆ ಎಂದರು.

ವಂದೆ ಮಾತರಂ ರೈಲು ಕೊಡಿ: ಸ್ವಚ್ಛತೆ, ಬಯೋ ಟಾಯಲೆಟ್, ವೈಫೈ ವ್ಯವಸ್ಥೆ, ಮೆಟ್ರೋ ರೈಲಿಗೆ ಸಂಪರ್ಕ ಹೀಗೆ ಒಟ್ಟಾರೆ ವಿಶ್ವ ದರ್ಜೆಯ ಸೇವೆಯನ್ನು ರೈಲ್ವೆ ಇಲಾಖೆ ನೀಡುತ್ತಿದೆ. ಪ್ರತಿ ವ್ಯಕ್ತಿಯ ಸಾರಿಗೆ ಸಂಪರ್ಕದ ವೆಚ್ಚ ಕಡಿಮೆಗೊಳಿಸುವುದೇ ನಮ್ಮ ಗುರಿಯಾಗಿದೆ ಎಂದ ಪ್ರಹ್ಲಾದ ಜೋಷಿ ಅವರು, ಕರ್ನಾಟಕಕ್ಕೆ ಮುಂದಿನ ದಿನದಲ್ಲಿ 2-3 ವಂದೆ ಮಾತರಂ ರೈಲು ನೀಡಬೇಕೆಂದು ಕೇಂದ್ರದ ಕಲ್ಲಿದ್ದಲ್ಲು ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ ಸಾಹೆಬ್ ದಾದಾರವ್ ಪಟೀಲ ದಾನ್ವೆ ಅವರಲ್ಲಿ ಕೋರಿಕೊಂಡರು.

ಕೇಂದ್ರದ ಕಲ್ಲಿದ್ದಲ್ಲು ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ ಸಾಹೆಬ್ ದಾದಾರವ್ ಪಟೀಲ ದಾನ್ವೆ ಮಾತನಾಡಿ, ಧಾರ್ಮಿಕ ಕ್ಷೇತ್ರ ಕೊಲ್ಲಾಪೂರದ ಮಹಾಲಕ್ಷ್ಮೀಗೆ ಸಂಪರ್ಕ ಸಾಧಿಸುವ ಕಲಬುರಗಿ-ಕೊಲ್ಲಾಪೂರ ರೈಲು ಆರಂಭದಿಂದ ಈ ಭಾಗದ ರೈತರು, ಉದ್ಯಮಿಗಳು, ಯಾತ್ರಿಗಳು, ದೈನಂದಿನ ಓಡಾಟ ಮಾಡುವರಿಗೆ ತುಂಬಾ ಅನುಕೂಲವಾಗಲಿದೆ. ಬಹುದಿನಗಳ ಬೇಡಿಕೆ ಇದಾಗಿತ್ತು ಎಂದರು.

2014ರ ನಂತರ ಭಾರತೀಯ ರೈಲ್ವೆಯಲ್ಲಿ ತುಂಬಾ ಬದಲಾವಣೆಯಾಗಿದೆ. ಸ್ವಚ್ಛತೆ, ವೇಗ, ಸುರಕ್ಷತೆಗೆ ಆದ್ಯತೆ ನೀಡಿ ಪ್ರಯಾಣಿಕ ಸ್ನೇಹಿ ವಾತಾವರಣಗೊಳಿಸಿದೆ. ಈ ವರ್ಷ 400 ವಂದೆ ಮಾತರಂ ರೈಲು ಓಡಿಸಲಾಗುತ್ತಿದೆ. ಬುಲೆಟ್ ಟ್ರೇನ್, ಬ್ರಾಡಗೇಜ್ ಲೈನ್, ಎಲೆಕ್ಟ್ರಿಫಿಕೇಶನ್ ಕಾರ್ಯ ಭರದಿಂದ ಸಾಗಿದೆ. 2030 ರೊಳಗೆ ಬ್ರಾಡಗೇಜ್‍ನ ಎಲ್ಲಾ ಹಳಿಗೆ ಎಲೆಕ್ಟ್ರಿಫಿಕೇಶನ್ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದ ಸಚಿವರು ಇದೂವರೆಗೆ ರೈಲ್ವೆ ಸೇವೆ ಕಾಣದ ದೇಶದ ಪೂರ್ವ ಭಾಗಕ್ಕೆ ಹೆಚ್ಚಿನ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಶ್ರೀ ಶರಣಬಸವೇಶ್ವರ ನೆಲ ಕಲಬುರಗಿಯಿಂದ ಹೊರಡುವ ನೂತನ ರೈಲು, ಗಾಣಗಾಪೂರ ದತ್ತಾತ್ರೇಯ, ಅಕ್ಕಲಕೋಟ್, ಸೋಲಾಪೂರ ಸಿದ್ದೇಶ್ವರ, ಪಂಡರಾಪೂರ ಕೊನೆಗೆ ಮಹಾಲಕ್ಷ್ಮೀಯ ಕೊಲ್ಲಾಪೂರ ವರೆಗೆ ಹೀಗೆ ಧಾರ್ಮಿಕ ಕ್ಷೇತ್ರಗಳ ನಡುವೆ ಸಂಚರಿಸಲಿದ್ದು, ವಿಶೇಷವಾಗಿ ಭಕ್ತ ವೃಂದಕ್ಕೆ, ಸ್ಥಳೀಯ ಕಾರ್ಮಿಕರು, ರೈತರಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಬಹುದಿನ ಬೇಡಿಕೆಯನ್ನು ಈಡೇರಿಸಿದ ಪ್ರಧಾನಮಂತ್ರಿ ಮತ್ತು ರೈಲ್ವೆ ಸಚಿವರಿಗೆ ಅಭಿನಂದನೆ ತಿಳಿಸುವೆ ಎಂದರು.

ರೈಲು ಓಡಾಟದ ವಿವರ:
ಕಲಬುರಗಿ-ಕೊಲ್ಲಾಪೂರ ಎಕ್ಸ್‍ಪ್ರೆಸ್ (ರೈಲು ಸಂ.22155) ರೈಲು ಪ್ರತಿದಿನ ಬೆಳಿಗ್ಗೆ 6.40 ಗಂಟೆಗೆ ಕಲಬುರಗಿಯಿಂದ ಹೊರಡಲಿದೆ. ಗಾಣಗಾಪೂರ, ಅಕ್ಕಲಕೋಟ್, ಸೋಲಾಪೂರ, ಕುರಡುವಾಡಿ, ಪಂಡರಾಪೂರ, ಮೀರಜ್, ಜೈಸಿಂಗ್‍ಪೂರ, ಹಟಕನಂಗಳೆ ರೈಲು ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಕೊಲ್ಲಾಪೂರಕ್ಕೆ ಅದೇ ದಿನ ಮಧ್ಯಾಹ್ನ 2.15 ಗಂಟೆಗ ತಲುಪಲಿದೆ. ಅದೇ ರೀತಿ ಇದೇ ಮಾರ್ಗದಲ್ಲಿ ಕೊಲ್ಲಾಪೂರ-ಕಲಬುರಗಿ ಎಕ್ಸ್‍ಪ್ರೆಸ್ (ರೈಲು ಸಂ.22156) ರೈಲು ಮಧಾಹ್ನ 3 ಗಂಟೆಗೆ ಕೊಲ್ಲಾಪೂರದಿಂದ ಹೊರಟು ಅದೇ ದಿನ ಕಲಬುರಗಿ ರೈಲು ನಿಲ್ದಾಣಕ್ಕೆ ರಾತ್ರಿ 10.45 ಗಂಟೆಗೆ ತಲುಪಲಿದೆ. ಕಲಬುರಗಿ-ಕೊಲ್ಲಾಪೂರ ನಡುವಿನ ಅಂತರ 428 ಕಿ.ಮೀ. ಇದೆ.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಎಂ.ಎಲ್.ಸಿ. ಅಮರನಾಥ ಪಾಟೀಲ, ಸೋಲಾಪೂರ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶೈಲೇಶ ಗುಪ್ತಾ, ಸೀನಿಯರ್ ಡಿವಿಜನ್ ಅಪರೇಟಿಂಗ್ ಮ್ಯಾನೇಜರ್ ಪ್ರದೀಪ ಹಿರಾಡೆ, ಕರ್ಮಷಿಯಲ್ ಮ್ಯಾನೇಜರ್ ಹರ್ಷಿತ್ ಬಿಸ್ನಾಯ್, ಕಲಬುರಗಿ ರೈಲು ನಿಲ್ದಾಣದ ಸ್ಟೇಷನ್ ಮ್ಯಾನೇಜರ್ ಆರ್.ಮೋನಿ ಸೇರಿದಂತೆ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರು, ಇತರೆ ಹಿರಿಯ ಅಧಿಕಾರಿಗಳು ಇದ್ದರು. ಮುಂಬೈನಿಂದ ವರ್ತುವಲ್ ಮೂಲಕ ಭಾಗವಹಿಸಿದ ಸೆಂಟ್ರಲ್ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅಲೋಕ ಸಿಂಗ್ ಸರ್ವರನ್ನು ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here