ಶಹಾಬಾದ:ಕೋವಿಡ್‍ಕ್ಕಿಂತಲೂ ಮುಂಚೆ ನಿಲ್ಲುತ್ತಿದ್ದ ಎಲ್ಲಾ ರೈಲುಗಳನ್ನು ಶಹಾಬಾದ ರೇಲ್ವೆ ನಿಲ್ದಾಣದಲ್ಲಿ ನಿಲ್ಲಬೇಕು.ರೇಲ್ವೆ ನಿಲ್ದಾಣ ಸಮೀಪದ ಬಡಾವಣೆಗಳಿಗೆ ವಾಹನಗಳ ಹೋಗಿ ಬರಲು ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಶನಿವಾರ ಶಹಾಬಾದ ತಾಲೂಕಾ ಹೋರಾಟ ಸಮಿತಿ ವತಿಯಿಂದ ನಗರದ ರೇಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕೋವಿಡ್ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ಹಠಾತನೇ ನಿಲ್ಲಿಸಿ ರೇಲ್ವೆ ಇಲಾಖೆ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಮಾಡುತ್ತಿದೆ.ಶಹಾಬಾದ ತಾಲೂಕಿನ ಗ್ರಾಮಗಳಾದ ಮರತೂರ ಹಾಗೂ ನಂದೂರ ಚಿಕ್ಕ ರೇಲ್ವೆ ನಿಲ್ದಾಣದಲ್ಲಿ ಕೆಲವು ರೇಲ್ವೆಗಳು ನಿಲುಗಡೆಯಾಗುತ್ತಿವೆ. ಆದರೆ ತಾಲೂಕಾ ಕೇಂದ್ರವಾದ ಶಹಾಬಾದ ರೇಲ್ವೆ ನಿಲ್ದಾಣದಲ್ಲಿ ರೇಲ್ವೆಗಳು ನಿಲ್ಲುತ್ತಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ.ಈ ಬಗ್ಗೆ ಅನೇಕ ಬಾರಿ ಹೋರಾಟ ಮಾಡಿದರೂ, ಮನವಿ ಸಲ್ಲಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಹೋರಾಟಗಾರರು ಒತ್ತಾಯ ಮಾಡಿದಾಗ ಮಾತ್ರ ಅಧಿಕಾರಿಗಳಿಗೆ ಬೇಟಿಯಾಗಲು ಬರುತ್ತಾರೆ.ಆದರೆ ಸಾರ್ವನಿಕರ ಹಿತದೃಷ್ಟಿಯಿಂದ ಎಂದು ರೇಲ್ವೆ ನಿಲುಗಡೆ ಮಾಡಲೂ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಕಾ ತಾಂಡಾ, ಕೊಳಸಾಫೈಲ್,ಹನುಮಾನ ತಾಂಡಾ,ಸಿದ್ಧಾರ್ಥ ನಗರ, ಚುನ್ನಾಬಟ್ಟಿ ಸೇರಿದಂತೆ ಅನೇಕ ಬಡಾವಣೆಗಳಿಗೆ ಹೋಗಲು ಇಂದಿಗೂ ಹಳಿ ದಾಟಿ ಹೋಗಬೇಕಾಗಿದೆ.ಅವರಿಗೆ ಹೋಗಿ ಬರಲು ಸಾಕಷ್ಟು ತೊಂದರೆಯಾಗುತ್ತಿದೆ.ಅವರಿಗೆ ಮೇಲ್ಸೇತುವೆ ಅಥವಾ ಒಳಸೇತುವೆ ನಿರ್ಮಿಸಿಕೊಡುವತ್ತ ಗಮನಹರಿಸಬೇಕಾಗಿದೆ.ಪ್ರತಿಭಟನೆ ಮಾಡಿದಾಗ ಕೆಲವು ರೈಲುಗಳನ್ನು ನಿಲ್ಲಿಸುವ ಭರವಸೆ ನೀಡಿ ಮತ್ತೆ 2-3 ತಿಂಗಳಲ್ಲಿ ಮತ್ತೆ ಆದೇಶವನ್ನು ಹಿಂಪಡೆಯಲಾಗುತ್ತಿದೆ. ನಗರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ.ಇಲ್ಲಿನ ಜನರಿಗೆ ಕಲಬುರಗಿಗೆ, ಸೋಲಾಪೂರಗೆ ಹೋಗಲೂ ತೊಂದರೆಯಾಗುತ್ತಿದೆ. ನೌಕರಸ್ಥರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ.
ಕೇವಲ ಕಡಿಮೆ ಜನಸಂಖ್ಯೆ ಹೊಂದಿರುವ ಚಿತ್ತಾಪೂರ ರೇಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತಿದೆ.ಅದೇ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರದಲ್ಲಿ ರೈಲು ನಿಲುಗಡೆಯಾಗುತ್ತಿಲ್ಲ. ಪ್ರತಿಭಟನೆ ಹಿಂದಕ್ಕೆ ಪಡೆಯಬೇಕಾದರೆ ಕೋವಿಡ್‍ಕ್ಕಿಂತ ಮುಂಚೆ ನಿಲ್ಲುತ್ತಿದ್ದ ಎಲ್ಲಾ ರೈಲುಗಳು ನಿಲುಗಡೆಯಾಗಬೇಕೆಂದು ಹೇಳಿದರು.ನಂತರ ರೇಲ್ವೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಶಹಾಬಾದ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮಯೂರ, ಶೇಖ ಬಾಬು ಉಸ್ಮಾನ,ನರಸಿಂಹಲೂ ರಾಯಚೂರಕರ್, ಭೀಮಾಶಂಕರ ಕಾಂಬಳೆ,ಪುನಿತ್ ಹಳ್ಳಿ, ವಸಂತ ಕಾಂಬಳೆ, ನಾಗಪ್ಪ ರಾಯಚೂರಕರ್, ಮಲ್ಲೇಶಿ ಭಜಂತ್ರಿ,ಶೇರ ಅಲಿ, ಶೇಖ ಚಾಂದ ಪಾಷಾ, ಶಿವರಾಜ ಕೋರೆ,ಸುಭಾಷ ಸಾಕ್ರೆ,ರಾಮು ಗುತ್ತೆದಾರ,ಶಿವಶಾಲಕುಮಾರ ಪಟ್ಟಣಕರ್, ಕಿರಣ ಚವ್ಹಾಣ, ಮುನ್ನಾ ಪಟೇಲ್ ಸೇರಿದಂತೆ ಅನೇಕ ಜನರು ಇದ್ದರು.