ಒಂದೇ ಸೂರಿನಡಿ ಆಧುನಿಕ ತಂತ್ರಜ್ಞಾನ ಮತ್ತು ಕಟ್ಟಡ ಸಾಮಗ್ರಿಗಳ ಬಗ್ಗೆ ಹೆಚ್ಚಿನ ಮಾಹಿತಿ, ರಿಯಾಯತಿ ದರದಲ್ಲೂ ಕೆಲ ಸಾಮಗ್ರಿಗಳನ್ನು ಖರೀದಿಸಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇನ್ನು ಅಸೋಶಿಯೇಷನ್‌ನಿಂದ ಉಚಿತ ರಕ್ತದಾನ ಶಿಬಿರ, ಕಟ್ಟಡ ಕಾರ್ಮಿಕರಿಗೆ ಸುರಕ್ಷಿತ ಕಿಟ್, ಇಂಜಿನಿಯರ್ ದಿನಾಚರಣೆ ಮಾಡಿ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದೆ. -ಮುರಳೀಧರ ಜಿ. ಕರಲಗಿಕರ್, ಅಧ್ಯಕ್ಷರು ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಶಿಯೇಷನ್.
ಕಲಬುರಗಿ: ಸರ್. ಎಂ. ವಿಶ್ವೇಶ್ವರಯ್ಯನವರ ೧೬೨ನೇ ಜನ್ಮದಿನಾಚರಣೆ ಅಂಗವಾಗಿ ಕನ್ಸ್‌ಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ ಅಸೋಶಿಯೇಷನ್ ಹಾಗೂ ಬೆಂಗಳೂರಿನ ಯು.ಎಸ್. ಕಮ್ಯುನಿಕೇಷನ್ಸ್ ವತಿಯಿಂದ ದಿ. ೨೩ ರಿಂದ ೨೫ ರವರೆಗೆ ಮೂರು ದಿನಗಳ ಕಾಲ ಇಲ್ಲಿನ ಅಪ್ಪನ ಕೆರೆ ಸಮೀಪದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಬೃಹತ್ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ (ಬಿಲ್ಡ್ ಟೆಕ್-೨೦೨೨) ಹಮ್ಮಿಕೊಳ್ಳಲಾಗಿದೆ ಎಂದು ಅಸೋಶಿಯೇಷನ್ ಅಧ್ಯಕ್ಷ ಮುರುಳೀಧರ ಜಿ. ಕರಲಗೀಕರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಕೆಲ ವರ್ಷಗಳಿಂದ ಬಿಲ್ಡ್ ಟೆಕ್ ನಡೆದಿರಲಿಲ್ಲ, ಈ ಬಾರಿ ಬಿಲ್ಡ್ ಟೆಕ್‌ಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ೧೦೪ ಕಂಪನಿಗಳು ಮಳಿಗೆ ಹಾಕಲಿವೆ. ಕಾಳಿಕಾ ಸ್ಟೀಲ್ ಕಂಪನಿಯು ಈ ಪ್ರದರ್ಶನದ ಪ್ರಾಯೋಜಕತ್ವ ಮಾಡಿದ್ದಾರೆ ಎಂದರು.
ದಿ. ೨೩ ರಂದು ಬೆಳಗ್ಗೆ ೧೧: ೩೦ ಗಂಟೆಗೆ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಲೋಕೋಪಯೋಗಿ ಇಲಾಖೆಯ ವಲಯ ಕಚೇರಿಯ ಮುಖ್ಯ ಇಂಜಿನಿಯರ್ ಜಗನ್ನಾಥ ಹಾಲಿಂಗೆ ಜ್ಯೋತಿ ಬೆಳಗಿಸುವರು. ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್, ಕಾಲಿಕಾ ಸ್ಟೀಲ್ ಕಂಪೆನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅತುಲ್ ಪರಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅಸೋಶಿಯೇಷನ್ ಜಿಲ್ಲಾಧ್ಯಕ್ಷ ಮುರಳೀಧರ ಜಿ. ಕರಲಗಿಕರ್ ಅಧ್ಯಕ್ಷತೆವಹಿಸುವರು. ಅಸೋಶಿಯೇಷನ್ ಉಪಾಧ್ಯಕ್ಷ ಅನಿಲಕುಮಾರ ಜಿ. ಗಂಗಾಣಿ, ಕಾರ್ಯದರ್ಶಿ ಪ್ರವೀಣಕುಮಾರ ಮೋದಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೃಹಾಲಂಕಾರ ಸಾಮಗ್ರಿ, ಸಿಮೆಂಟ್, ಗ್ರಾನೈಟ್, ಎಲೆಕ್ಟ್ರಿಕಲ್ ಫಿಟ್ಟಿಂಗ್ಸ್, ಕಿಟಕಿ, ಗ್ಲಾಸ್, ಸೋಲಾರ, ಪೀಠೋಪಕರಣಗಳು, ಮಾಡ್ಯೂಲರ್ ಕಿಚನ್, ಮಳೆ ನೀರು ಕೋಯ್ಲು, ಗೃಹ ನಿರ್ಮಾಣ ಸಾಲ ಸೌಲಭ್ಯದ ಬಗ್ಗೆ ಅಗತ್ಯ ಮಾಹಿತಿ ಸಹ ನೀಡಲಾಗುತ್ತದೆ. ಈ ಸಂಬಂಧ ಮೂರು ರಾಷ್ಟ್ರೀಕೃತ ಬ್ಯಾಂಕ್‌ಗಳ ಮಳಿಗೆಗಳು ಸಹ ಇರಲಿವೆ ಎಂದು ವಿವರಿಸಿದರು ಅಸೋಶಿಯೇಷನ್ ಉಪಾಧ್ಯಕ್ಷ ಅನಿಲಕುಮಾರ ಜಿ. ಗಂಗಾಣಿ, ಕಾರ್ಯದರ್ಶಿ ಪ್ರವೀಣಕುಮಾರ ಮೋದಿ, ಬೆಂಗಳೂರಿನ ಯುಎಸ್ ಕಮ್ಯುನಿಕೇಷನ್ ವ್ಯವಸ್ಥಾಪಕ ಉಮಾಪತಿ ಇದ್ದರು.