ಶಹಾಬಾದ: ನಗರದಲ್ಲಿ ಸೋಮವಾರ ಸಾಯಂಕಾಲ ಸುರಿದ ಭಾರಿ ಮಳೆಯಿಂದ ಶಾಲಾ-ಕಾಲೇಜಿನ ಆವರಣಗಳು ಜಲಾವೃತ, ರೇಲ್ವೆ ನಿಲ್ದಾಣದಲ್ಲಿ ಬಾಲಕರ ವಸತಿ ನಿಲಯದಲ್ಲಿ ನುಗ್ಗಿದ ನೀರು, ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹ, ರಸ್ತೆ ತಗ್ಗುಗಳಲ್ಲಿ ನೀರು ತುಂಬಿಕೊಂಡು ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಉಂಟಾಯಿತು.
ನಗರದ ನೂತನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಹಾಗೂ ರೇಲ್ವೆ ನಿಲ್ದಾಣದಲ್ಲಿ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿ ಮಾಡಿತು. ರೇಲ್ವೆ ನಿಲ್ದಾಣದ ಆಚೆ ಇರುವ ಬಡಾವಣೆಗಳಿಗೆ ಹೋಗುವ ಜನರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸಬೇಕಾಯಿತು. ಅಪಾರ ಪ್ರಮಾಣದ ನೀರು ರೇಲ್ವೆ ಟಿಕೆಟ್ ಕೌಂಟರ್ ಒಳಗಡೆ ಪ್ರವೇಶಿಸಿದ್ದರಿಂದ ನೀರನ್ನು ಹೊರಹಾಕುವುದೇ ದೊಡ್ಡ ಸಮಸ್ಯೆಯಾಯಿತು. ಪ್ರತಿ ಭಾರಿ ಮಳೆಯಾದ ಸಮಯದಲ್ಲಿ ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತಿದೆ ಎಂದು ಸಾರ್ವಜನಿಕರ ದೂರಾಗಿದೆ.
ರಸ್ತೆಯ ಮೇಲೆ ನೀರು: ನಗರದ ಮುಖ್ಯ ರಸ್ತೆಯಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಮಾಡಿರುವುದರಿಂದ ಮಳೆ ಬಂದಾಗಲೊಮ್ಮೆ ನೀರು ರಸ್ತೆಯ ಮೇಲೆ ಸಂಗ್ರಹವಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿತು.ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗೆ ಸಾಕಷ್ಟು ಪ್ರಮಾಣದಲ್ಲಿ ರಸ್ತೆಯ ಮೇಲೆಯೇ ನೀರು ನೀತಿದ್ದರಿಂದ ಇಲ್ಲಿನ ಮುಖ್ಯ ರಸ್ತೆ ಹಳ್ಳವಾಗಿ ಮಾರ್ಪಟ್ಟಿತ್ತು.
ಸಾರ್ವಜನಿಕರು ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡು ಬಂದಿತು.ಚರಂಡಿಗಳು ತುಂಬಿಕೊಂಡು ರಸ್ತೆಯ ಮೇಲೆ ಪ್ಲಾಸ್ಟಿಕ,ಕಸ, ಕೊಳಕು ನೀರು ರಸ್ತೆಯ ತುಂಬೆಲ್ಲಾ ಹರಿಯಿತು.
ಬಡಾವಣೆಗೆ ಹೋಗಲು ದಾರಿಯಿಲ್ಲ: ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವುದರಿಂದ ಅಪಾರ ಪ್ರಮಾಣ ನೀರು ನಿಜಾಮ ಬಜಾರ ರೇಲ್ವೆ ಸೇತುವೆ ಕೆಳಗಡೆಯಿಂದ ಹರಿಯುತ್ತಿರುವುದರಿಂದ ಕೊಳಸಾ ಫೈಲ್, ಸಿದ್ಧಾರ್ಥ ನಗರ, ದಕ್ಕಾ ತಾಂಡಾ ಸೇರಿದಂತೆ ಇತರ ಬಡಾವಣೆಗಳಿಗೆ ಹೋಗುವ ಏಕೈಕ ಮಾರ್ಗ ಇದಾಗಿದ್ದು, ಇಲ್ಲಿನ ಜನರು ಮನೆಗಳಿಗೆ ತೆರಳಬೇಕಾದರೆ ತೊಂದರೆ ಅನುಭವಿಸುತ್ತಿದ್ದಾರೆ.ಸುಮಾರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರೂ ಶಾಶ್ವತ ಪರಿಹಾರ ದೊರಕಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.ಸಾರ್ವಜನಿಕರ ತೊಂದರೆಯನ್ನು ಗಮನಿಸುತ್ತಿಲ್ಲ ಎಂಬುದೇ ದುರಂತ ಸಂಗತಿಯಾಗಿದೆ.