ಕಲಬುರಗಿ: ನಾಗರ ಪಂಚಮಿಯಂದು ಹುತ್ತಿಗೆ ಹಾಲೆರೆಯದೆ ನಿರ್ಗತಿಕರಿಗೆ, ಬಡವರಿಗೆ ಮಕ್ಕಳಿಗೆ ಹಾಲು ತಲುಪಿಸಬೇಕು ಎಂದು ಪ್ರಗತಿಪರ ಚಿಂತಕಿ ಡಾ. ಮೀನಾಕ್ಷಿ ಬಾಳಿ ತಿಳಿಸಿದರು.
ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಿದ್ದ ಬಸವ ಪಂಚಮಿ ಕುರಿತು ವಿದ್ಯಾರ್ಥನಿಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಗಾರಾಧನೆಗೆ ಬಹಳ ಹಳೆಯ ಇತಿಹಾಸವಿದ್ದು, ನೈಸರ್ಗಿಕ, ಚಾರಿತ್ರಕ ಸಂಬಂಧವಿಟ್ಟುಕೊಂಡಿದೆ. ನಾಗರ ಹಾವು ಕಚ್ಷಿದರೆ ಸಾಯುತ್ತೇವೆ ಎಂಬ ನಂಬಿಕೆಯಿಂದ ನಾಗಪಂಚಮಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ನಾಗಾರಾಧನೆಯ ಪರಂಪರೆಯನ್ನು ಬಿಚ್ಚಿಟ್ಟರು.
ಹಾವಿಗೆ ಹಾಲೆರೆಯುವುದರಿಂದ ಹಾವು ಸತ್ತು ಹೋಗುತ್ತದೆ. ಪರಿಸರ ನಾಶವಾಗಬಲ್ಲದು. ಪರಿಸರ ನಾಶದಿಂದ ಮನುಕುಲಕ್ಕೆ ಸಾಕಷ್ಟು ನಷ್ಟವಾಗಲಿದೆ ಎಂದರು.
ಹೀಗಾಗಿ ಪೌಷ್ಠಿಕಾಂಶದಿಂದ ಕೂಡಿದ ಹಾಲನ್ನು ಹಸಿದ ಹೊಟ್ಟೆಗೆ ನೀಡಬೇಕು. ಹಾಲು ಎರೆಯುವ ಅಪರಾಧ ಯಾರೂ ಮಾಡಬಾರದು ಎಂದು ಹೇಳಿದರು.
ಉದ್ಯಮಿ ಮೆಹರಾಜ ಪಟೇಲ್, ಪತ್ರಕರ್ತ ಸುರೇಶ ಬಡಿಗೇರ, ಡಿಡಿ ಪಿಯು ಶಿವಶರಣಪ್ಪ ಮೂಳೆಗಾಂವ, ಸಾಹಿತಿ ಶಿವರಂಜನ್ ಸತ್ಯಂಪೇಟೆ, ರಂಗಭೂಮಿ ಕಲಾವಿದ ಸಂದೀಪ ಬಿ, ಉಪನ್ಯಾಸಕ ಡಾ. ಪೃಥ್ವಿರಾಜ ಬೆಡಜೂರಗಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಕೆ. ಜವಳಿ, ಯುವ ಮುಖಂಡ ಹನುಮಂತ ಇಟಗಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿ ಬಂಧುತ್ವ ವೇದಿಕೆಯ ವಿಭಾಗೀಯ ಅಧ್ಯಕ್ಷ ದಿನೇಶ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಯಶವಂತ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಸಂತೋಷ ಮೆಲ್ಮನಿ ನಿರೂಪಿಸಿದರು.
ಅಶ್ವಿನಿ ಮದನಕರ್, ನಾಗರಾಜ ಸಾಲೊಳ್ಳಿ, ಅನಿಲ ಟೆಂಗಳಿಕರ ಸೇರಿದಂತೆ ಇತರರು ಇದ್ದು, ನಂತರ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.