ಕಲಬುರಗಿ : ಪ್ರಯತ್ನದಿಂದ ಫಲಿತಾಂಶ ಸಾಧ್ಯ. ಪ್ರಯತ್ನಕ್ಕೆ ಮನಸು ಮಾಡಬೇಕು. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೂಡಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಇಡೀ ಜಗತ್ತನ್ನು ಗೆಲ್ಲಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಬೂಬ ಪಾಶಾ ಹೇಳಿದರು.
ಬೆಳಮಗಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ಸಂಸತ್ತು ರಚನೆ, ೨೪ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಸತ್ಕಾರ ಹಾಗೂ ನೂತನವಾಗಿ ಪ್ರವೇಶ ಪಡೆದ ೬ನೇ ತರಗತಿ ಮಕ್ಕಳಿಗೆ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಂತಾಗಬೇಕು. ಆ ಮೂಲಕ ಈ ಭಾಗದಿಂದ ಐಎಎಸ್, ಕೆಎಎಸ್ ಪಾಸಾಗಿ ಉನ್ನತ ಹುದ್ದೆಗೇರುವ ಕನಸನ್ನು ನನಸನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆಕೊಟ್ಟರು.
ಮುಖ್ಯ ಅತಿಥಿಗಳಾಗಿದ್ದ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಇಂದಿನ ಅವಮಾನ, ನಾಳೆಯ ಸನ್ಮಾನ. ಇವತ್ತಿನ ವೇದನೆ ನಾಳಿನ ಸಾಧನೆ. ಹೀಗಾಗಿ ಇಂದು ಕಷ್ಟಪಟ್ಟು ಓದಿದರೆ ನಾಳೆ ಸುಖದ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಬೆಳಮಗಿ ಗ್ರಾಮದ ಮುಖ್ಯ ರಸ್ತೆಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದೆ. ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ಅಸಾಧ್ಯ ಎನಿಸುವಷ್ಟು ಕೆಟ್ಟುಹೋಗಿದೆ. ಇದನ್ನು ಶೀಘ್ರವೇ ಸಿಸಿ ರಸ್ತೆಯನ್ನಾಗಿ ಮಾಡಿಕೊಡುವುದಾಗಿ ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ ಹೇಳಿದರು. ಮಲೆನಾಡಿನಂತಹ ಪ್ರದೇಶ ಇರುವುದರಿಂದ ಇನ್ನಷ್ಟು ಹಚ್ಚಹಸಿರಾಗಿ ಬೆಳಮಗಿ ಶಾಲೆ ಸೌಂದರ್ಯ ಹೆಚ್ಚಲು ೫೦೦ ಸಸಿಗಳನ್ನು ತರಿಸಿಕೊಡುವುದಾಗಿ ಮಲಾಜಿ ಭರವಸೆ ನೀಡಿದರು.
ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿಸ್ಟಿಂಕ್ಷನ್ ಬಂದಿರುವ ೨೪ ವಿದ್ಯಾರ್ಥಿಗಳಿಗೆ ಹಾಗು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವ ೨೪ ವಿದ್ಯಾರ್ಥಿಗಳಿಗೆ ಸತ್ಕರಿಸಿದರು. ಹೊಸದಾಗಿ ಬಂದ ೬ ನೇ ತರಗತಿ ಶಾಲೆಯ ಮಕ್ಕಳಿಗೆ ಸಸಿಗಳನ್ನು ವಿತರಿಸುವ ಮೂಲಕ ಸ್ವಾಗತ ಕೋರಿದರು.
ಮುಖಂಡರಾದ ಹಣಮಂತರಾವ ಮಲಾಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಡೋಲೆ, ಶಿಕ್ಷಕ ಡಾ.ನಾಗರಾಜ ಹಳಗೋಧಿ, ಕಲ್ಯಾಣರಾವ ಮಾಲಿಪಾಟೀಲ ವೇದಿಕೆಯಲ್ಲಿದ್ದರು. ಶಾಲೆಯ ಪ್ರಾಚಾರ್ಯ ಅಣವೀರ ಹರಸೂರ ಅಧ್ಯಕ್ಷತೆ ವಹಿಸಿದ್ದರು. ಪ್ರದೀಪಕುಮಾರ ಸ್ವಾಗತಿಸಿದರು.