ಗಂಟು ಚರ್ಮರೋಗಕ್ಕೆ ಜಾನುವಾರುಗಳ ಬಲಿ

0
12
  • ತಲಾ 50,000 ರೂ. ಪರಿಹಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
  • ಸತ್ತ ಜಾನುವಾರು ಮರಣೋತ್ತರ ಪರೀಕ್ಷೆಗೂ ವೈದ್ಯರಿಲ್ಲ ಎಂದು ಕಳವಳ
  • ರಾಜ್ಯ ಸರಕಾರಕ್ಕೆ ಪತ್ರ ಬರೆಯುವೆ ಎಂದ ಮಾಜಿ ಮುಖ್ಯಮಂತ್ರಿಗಳು

ಬೆಂಗಳೂರು: ಗಂಟು ಚರ್ಮರೋಗದಿಂದ ಜಾನುವಾರುಗಳನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ತಲಾ 50,000 ರೂಪಾಯಿ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ಗಂಟು ಚರ್ಮ ರೋಗದಿಂದ ರಾಜ್ಯಾದ್ಯಂತ ಜಾನುವಾರುಗಳು ಸಾಯುತ್ತಿರುವ ಮಾಹಿತಿ ನಿರಂತರವಾಗಿ ಬರುತ್ತಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹೀಗೆ ಸಾವನ್ನಪ್ಪುವ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಲಿಕ್ಕೂ ವೈದ್ಯರು ಇಲ್ಲದಂಥ ದುಃಸ್ಥಿತಿ ರಾಜ್ಯದಲ್ಲಿ ತಲೆದೋರಿದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ರೋಗದಿಂದ ಸಾವನ್ನಪ್ಪುವ ಒಂದು ಹಸಿವಿಗೆ ತಲಾ 20,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸರಕಾರ ಹೇಳಿದೆ. ಅದಿನ್ನೂ ಹೇಳಿಕೆ ಕೊಡುವುದರಲ್ಲೇ ಇದೆ. ಇಲ್ಲಿ ರೈತರು ಜೀವನಾಧಾರವಾಗಿರುವ ಜಾನುವಾರುಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಕೇವಲ 20,000 ರೂಪಾಯಿ ಪರಿಹಾರ ನೀಡಿದರೆ ರೈತರ ಕಷ್ಟ ಪರಿಹರಿಸಿದಂತೆ ಆಗುವುದಿಲ್ಲ. ಕನಿಷ್ಠ ಒಂದು ಹಸುವಿಗೆ 50,000 ರೂಪಾಯಿ ಪರಿಹಾರ ಕೊಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಈ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರವನ್ನೂ ಬರೆದು ಒತ್ತಾಯ ಮಾಡಲಾಗುವುದು ಎಂದು ತಿಳಿಸಿದ ಮಾಜಿ ಮುಖ್ಯಮಂತ್ರಿಗಳು; ಅನೇಕ ದಿನಗಳಿಂದ ಈ ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ. ಇಷ್ಟೊತ್ತಿಗಾಗಲೇ ಸರಕಾರ ಜಾನುವಾರುಗಳಿಗೆ ಲಸಿಕೆ ನೀಡಿ ಕ್ರಮ ವಹಿಸಬೇಕಾಗಿತ್ತು. ಆದರೆ, ಸರಕಾರ ಸಮಯ ವ್ಯರ್ಥ ಮಾಡುತ್ತಿದೆ ಎಂದು ದೂರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here