ಶಹಾಬಾದ: ಸರಕಾರದ ಮಹತ್ವಾಕಾಂಕ್ಷೆಯ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾಧಿಕಾರಿಯವರು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಶಹಾಬಾದನಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿಯವರ ಅಹವಾಲು ಸ್ವೀಕಾರ ಕಾರ್ಯಕ್ರಮ ಅವ್ಯಸ್ಥೆಯ ಆಗರವಾಗಿತ್ತು.
ಪೂರ್ವ ಯೋಜನೆಯಂತೆ ಜಿಲಾಧಿಕಾರಿ ಯಶವಂತ.ವಿ.ಗುರುಕರ್ ಅವರು ಬೆಳಗ್ಗೆ ಹನ್ನೊಂದು ಗಂಟೆಗೆ ಆಗಮಿಸಿದರು. ಅμÉ್ಟೂತ್ತಿಗಾಗಲೇ ನೂರಾರು ಜನ ತಂಡೋಪ ತಂಡವಾಗಿ ಅಹವಾಲು ಸಲ್ಲಿಸಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಆದರೆ ಅಹವಾಲು ಸಲ್ಲಿಸಲು ಬಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆÀ, ಕೂಡಲು ಆಸನಗಳ ವ್ಯವಸ್ಥೆಯಿಲ್ಲದೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿಲ್ಲಲು ಪರದಾಡಿದರು.
ನಂತರ ಜಿಲ್ಲಾಧಿಕಾರಿಯವರು ಕಿರಿದಾದ ತಹಸೀಲ್ದಾರ್ ಕಚೇರಿಯಲ್ಲಿ ಅಹವಾಲು ಸ್ವೀಕರಿಸುತ್ತಿದ್ದರೆ, ಹೊರಗಡೆ ಜನರ ನೂಕುನುಗ್ಗಲು ಅಧಿಕವಾಗಿತ್ತು. ಸಾರ್ವಜನಿಕರಿಗೆ ಕನಿಷ್ಠ ಶಾಮಿಯಾನ(ಟೆಂಟ್) ವ್ಯವಸ್ಥೆ ಕೂಡಾ ಮಾಡದಿರುವುದರಿಂದ ಸಾರ್ವಜನಿಕರು ಬಿಸಿಲಿನಲ್ಲಿಯೇ ನಿಲ್ಲುವಂತಾಯಿತು. ಬೆಳಿಗ್ಗೆ ಸಾರ್ವಜನಿಕರೇ ಅಧಿಕಾರಿಗಳಿಗೆ ಟೆಂಟ್ ವ್ಯವಸ್ಥೆ ಮಾಡಲು ತಿಳಿಸಿದರೂ ಕ್ಯಾರೇ ಎನ್ನಲಿಲ್ಲ.ಇದರಿಂದ ಸಾಕಷ್ಟು ಜನರು ಬಿಸಿಲಿನಲ್ಲಿಯೇ ನಿಂತು ಸ್ಥಳೀಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಯಾವುದೇ ಸರಕಾರಿ ಕಾರ್ಯಕ್ರಮಗಳು ನಡೆಯುವುದಿದ್ದರೆ ಸ್ಥಳೀಯ ನಗರಸಭೆಯ ಸಭಾಂಗಣ, ಸರಕಾರಿ ಪ್ರೌಢಶಾಲೆಯ ಆವರದಲ್ಲಿ ಅಥವಾ ಫಂಕ್ಷನ್ ಹಾಲ್ ಗಳಲ್ಲಿ ನಡೆಸಲಾಗುತ್ತದೆ. ಆದರೆ ಮಂಗಳವಾರ ಮಾತ್ರ ಹಾಗಾಗಲಿಲ್ಲ.ಇದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಅಧಿಕಾರಿಗಳು ಗುರಿಯಾದರು. ಜಿಲ್ಲಾಧಿಕಾರಿಗಳು ಜನರ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಸಾಕಷ್ಟು ಸಮಯ ಕೊಡಲಿಲ್ಲ. ಅಂಗವಿಕಲರು ಹಾಗೂ ವೃದ್ಧರು ಕೂಡಲು ಆಸನವಿಲ್ಲದರಿವುದರಿಂದ ಸಾಕಷ್ಟು ತೊಂದರೆ ಅನುಭವಿಸಿದರು.
ಅಲ್ಲದೇ ಅಂಗವಿಕಲರಿಗಾದರೂ ಕೂಡುವ ಆಸನ ನೀಡಬೇಕೆಂಬ ಸೌಜನ್ಯವೂ ಯಾರಲ್ಲೂ ಕಾಣಲಿಲ್ಲ. ಸಾಕಷ್ಟು ಜನರೂ ಇಲ್ಲಿನ ಅವ್ಯವಸ್ಥೆ ಕಂಡು ನಾಮಕಾವಾಸ್ತೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದು ಅಹವಾಲು ಸಲ್ಲಿಸದೇ ಅಲ್ಲಿಂದ ಹೊರಟು ಹೋದರು. ಜಿಲ್ಲಾಧಿಕಾರಿಯವರ ಬರುತ್ತಾರೆ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಾರೆ ಎಂದು ಗೊತ್ತಿದ್ದರೂ ಸಾರ್ವಜನಿಕರಿಗೆ ಅನುಕೂಲ ಮಾಡಕೊಡಬೇಕೆನ್ನುವ ಪರಿಜ್ಞಾನ ಕೂಡಾ ಯಾರಿಗೂ ಇಲ್ಲ ಎನ್ನುವ ಆರೋಪ ನಾಗರಿಕ ವಲಯದಿಂದ ಕೇಳಿ ಬಂತು.
ನೂರಾರು ಜನರು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡು ಮನವಿ ಸಲ್ಲಿಸಲು ಬಂದಿದ್ದರು. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಬೇಕಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮ ಬೆಳಿಗ್ಗೆ 11:45ಕ್ಕೆ ಪ್ರಾರಂಭವಾಗಿ 12:45 ಮುಗಿಯಿತು.ತರಾತುರಿಯಲ್ಲಿ ಕೇವಲ 1 ಗಂಟೆ ಮಾತ್ರ ಸಮಯ ಕೊಟ್ಟು ಜಿಲ್ಲಾಧಿಕಾರಿಗಳು ಅಲ್ಲಿಂದ ತೆರಳಿದರು. ಇನ್ನೂ ಹಲವಾರು ಜನರು ಅಹವಾಲು ಸಲ್ಲಿಸಲು ಬಂದರೂ ಅವರಿಗೆ ಸ್ಪಂದಿಸದಿರುವುದರಿಂದ ಜನರಲ್ಲಿ ನಿರಾಸೆ ಮೂಡಿಸಿತು. ಕನಿಷ್ಠ ಪಕ್ಷ ಸ್ಥಳೀಯ ಅಧಿಕಾರಿಗಳು ಅಹವಾಲು ಸ್ವೀಕರಿಸದೇ ಹೊರಟು ಹೋಗಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಲು ಜಿಲ್ಲಾಧಿಕಾರಿಗಳು ಪತ್ರಿಕೆಗಳಲ್ಲಿ ಮನವಿ ಮಾಡಿದ್ದರು. ಸಮಸ್ಯೆಗೆ ಪರಿಹಾರ ದೂರದ ಮಾತು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ,ಆಸನದ ವ್ಯವಸ್ಥೆ, ಟೆಂಟ್ ವ್ಯವಸ್ಥೆ ಮಾಡದಿರುವುದರಿಂದ ಜನರಿಗೆ ಬಿಸಿಲಿನಲ್ಲಿಯೇ ನಿಂತು ಸಮಸ್ಯೆಯಾಗಿದೆ.ಇನ್ನು ಮುಂದೆಯಾದರೂ ಇಂತಹ ಕಾರ್ಯಕ್ರಮ ಮಾಡುವಾಗ ಸೂಕ್ತ ವ್ಯವಸ್ಥೆ ಮಾಡಬೇಕು. ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲು ಸೂಚನೆ ನೀಡಬೇಕು – ನಾಗಣ್ಣ ರಾಂಪೂರೆ ಸಾರ್ವಜನಿಕ.
ನಿವೃತ್ತ ಕಾಲದಲ್ಲಿ ಆರಾಮವಾಗಿ ಕಾಲ ಕಳೆಯಬಹುದು ಎಂದು ಕೊಂಡ ನನಗೆ ಭಂಕೂರ ಗ್ರಾಮದ ಜಮೀನಿನ ಚಿಕ್ಕ ಸಮಸ್ಯೆಗಾಗಿ ತಹಸೀಲ್ದಾರ ಕಚೇರಿಗೆ ಅಲೆದು ಅಲೆದು ಸಾಕಷ್ಟು ತೊಂದರೆ ಅನುಭವಿಸಿದ್ದೆನೆ. ಸುಮಾರು 3 ವರ್ಷದಿಂದ ಬೀದರನಿಂದ ಶಹಾಬಾದ ಕಚೇರಿಗೆ ಬರುತ್ತಿದ್ದೆನೆ.ಅಲ್ಲದೇ ಹಲವಾರು ಬಾರಿ ಚಿತ್ತಾಪೂರಗೆ ಅಲೆದಾಡಿಸಿದ್ದಾರೆ.ಮನವಿ ಸಲ್ಲಿಸಿದರೂ ಹಿಂಬರಹ ನೀಡುವುದಿಲ್ಲ. ಸಕಾಲ ಕಾರ್ಯರೂಪಕ್ಕಿಲ್ಲ. ನಾನು ಜೀವಂತವಿದ್ದಾಗ ನನಗೆ ಇಷ್ಟೊಂದು ತೊಂದರೆ ಕೊಡುತ್ತಿದ್ದಾರೆ.ನಾನು ಸತ್ತ ಮೇಲೆ ನನ್ನ ಹೆಣ್ಣು ಮಕ್ಕಳಿಗೆ ಮಾಡಿ ಕೊಡುವ ಭರವಸೆ ನನಗೆ ಇಲ್ಲ.ಆದ್ದರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆನೆ. ಎರಡು ದಿನದೊಳಗೆ ಮಾಡಿ ಕೊಡಲು ಸೂಚಿಸಿದ್ದಾರೆ.ಕೊಡದಿದ್ದರೆ ಮುಂದೆ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುತ್ತೆನೆ- ಶಿವಪುತ್ರ ರಾಮಗೊಂಡ.
ರಸ್ತೆ ಸಮಸ್ಯೆ, ಬೆಳೆ ಪರಿಹಾರ ಸಮಸ್ಯೆ, ರುದ್ರಭೂಮಿ ಸಮಸ್ಯೆ, ಪಾಣಿ ಸಮಸ್ಯೆ, ಜಮೀನು ಒತ್ತುವರಿ, ನಾಯಿ-ಹಂದಿಗಳ ಸಮಸ್ಯೆ ಸೇರಿದಂತೆ ಸುಮಾರು 70 ಅರ್ಜಿಗಳು ಸ್ವೀಕೃತಗೊಂಡಿವೆ.ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಸಮಸ್ಯೆ ಪರಿಹಾರ ನೀಡುವಲ್ಲಿ ಕ್ರಮಕೈಗೊಳ್ಳುತ್ತೆವೆ- ಯಶವಂತ.ವಿ.ಗುರುಕರ್ ಜಿಲ್ಲಾಧಿಕಾರಿಗಳು ಕಲಬುರಗಿ.