ಕಲಬುರಗಿ: ಇಂದಿನ ಪರಿಸ್ಥಿತಿಯಲ್ಲಿ ಮಾನವರ ಮಧ್ಯ ಸಂಬಂಧಗಳು ಬಿರುಕು ಮೂಡುತ್ತಿವೆ. ಈ ದಿಸೆಯಲ್ಲಿ ಪ್ರತಿಯೊಬ್ಬರಲ್ಲಿ ಮಾನವೀಯ ಸಂಬಂಧಗಳು ಗಟ್ಟಿಗೊಂಡಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.
ಇಲ್ಲಿನ ಸಂಘದ ಅರಿವಿನ ಮನೆ ಸಭಾಂಗಣದಲ್ಲಿ ಸಂಘದ ಆಶ್ರಯದಲ್ಲಿ ಮಂಗಳವಾರ ನಡೆದ ಮಹಿಳೆಯರಿಗಾಗಿ ಮನೆ ಮದ್ದು ಹಾಗೂ ಮಾನವೀಯ ಸಂಬಂಧಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷವಾಗಿ ಮಹಿಳೆಯರು ತಮ್ಮನ್ನು ತಾವು ಪರಸ್ಪರ ಗೌರವಿಸುವುದು ಕಲಿಯಬೇಕು. ಸಕಾರಾತ್ಮಕ ಚಿಂತನೆ, ಆಲೋಚನೆ ಮಾಡಿಕೊಂಡು ನೆಮ್ಮದಿಯ ಬದುಕು ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಏಳು ಜಿಲ್ಲೆಗಳಲ್ಲಿ ಇದುವರೆಗೆ 25 ಸಾವಿರ ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, 45 ಸಾಂಸ್ಕೃತಿಕ ಭವನ ನಿರ್ಮಾಣ, 1509 ಕೌಶಲ್ಯ ಕೇಂದ್ರ,4885 ಪ್ರಗತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. -ಲೀಲಾ ಕಾರಟಗಿ, ಅಧ್ಯಕ್ಷೆ, ಶಿಕ್ಷಣ ಸಮಿತಿ.
ಶಿಕ್ಷಣ ಉಪಸಮಿತಿ ಅಧ್ಯಕ್ಷೆ ಲೀಲಾ ಕಾರಟಗಿ ಮಾತನಾಡಿ, ಹೆಣ್ಣು ದೈವಿಸ್ವರೂಪಳು, ಹೆಣ್ತನಕ್ಕೆ ತ್ಯಾಗ ಮಾಡುವ ಗುಣವಿದೆ. ಈ ದಿಸೆಯಲ್ಲಿ ಜೀವನದಲ್ಲಿ ಪ್ರೀತಿಸುವದು ಕಲಿಯಬೇಕು. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಸಹನಶೀಲತೆ, ತಾಳ್ಮೆಯಿಂದ ಇರಬೇಕು ಎಂದು ಸಲಹೆ ನೀಡಿದರು. ಇದೇ ವೇಳೆಗೆ ನಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಸಾಮಾನ್ಯ ಕಾಯಿಲೆ ಗುಣಪಡಿಸಿಕೊಳ್ಳುವ ತಾಕತ್ತಿದೆ ಎಂದು ಉಪನ್ಯಾಸ ನೀಡಿದರು.
ಆಯುರ್ವೇದ ವೈದ್ಯೆ ಡಾ. ನಿರ್ಮಲಾ ಕೆಳಮನಿ ವಿಶೇಷ ಉಪನ್ಯಾಸ ನೀಡಿದರು. ವೇದಿಕೆ ಮೇಲೆ ಸಂಘದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಕಾರ್ಯದರ್ಶಿ ಮಲ್ಲಿಕಾರ್ಜುನ, ಕೃಷಿ ಸಮಿತಿ ಅಧ್ಯಕ್ಷ ವ್ಹಿ. ಶಾಂತರೆಡ್ಡಿ, ಆಡಳಿತ ಮಂಡಳಿ ಸದಸ್ಯರಾದ ತಿಪ್ಪಣ್ಣ ರಡ್ಡಿ ಕೋಲಿ, ಪ್ರಭುದೇವ ಕಪ್ಪಗಲ್, ಶೃತಿ ಮತ್ತಿತರರಿದ್ದರು. ವಿಶೇಷ ಕರ್ತವ್ಯ ಅಧಿಕಾರಿ ಶೈಲಜಾ ಶೆಳ್ಳಗಿ ಸ್ವಾಗತಿಸಿದರು. ಶ್ವೇತಾ ಪ್ರಾಸ್ತಾವಿಕ ವಾಗಿ ಮಾತನಾಡಿದರು. ತಾಲೂಕು ಸಂಯೋಜಕಿ ಶೈಲಜಾ ಪಾಟೀಲ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಯು. ಭೀಮರಾವ, ಸುಧಾಕರ ದೊಡ್ಡಮನಿ, ಅರ್ಚನಾ, ನಾಗರಾಜ ಕೋರವಾರ, ಸಂಗಪ್ಪ ಪಾಟೀಲ, ಮಲ್ಲಿಕಾರ್ಜುನ ಆಲೂರ, ಉಜ್ವಲಾ ಶ್ರೀಮಂತ, ಹುಸೇನಿ ಪಾಳಾ, ರಾಹುಲ್, ಲೋಕೇಶ ಚಿನ್ನಾ, ಮತ್ತಿರರು ಭಾಗವಹಿಸಿದ್ದರು.