ಸುರಪುರ:ತಾಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ತಾಲೂಕು ಆಡಳಿತ ದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ನಾವು ನಿಮ್ಮ ಗ್ರಾಮಕ್ಕೆ ಬಂದು ನಿಮ್ಮಿಂದ ಸನ್ಮಾನ ಮಾಡಿಸಿಕೊಳ್ಳಲು ಬಂದಿಲ್ಲ,ತಾಲೂಕಿನಲ್ಲಿಯ ಗ್ರಾಮೀಣ ಜನರ ಕಂದಾಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಕಾರಣದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ನಿಮ್ಮ ಕಂದಾಯ ಸೇರಿದಂತೆ ಆಧಾರ,ರೇಷನ್ ಕಾರ್ಡ್,ಹಿರಿಯ ನಾಗರಿಕರ ಭತ್ಯೆ ಸೇರಿದಂತೆ ಸರಕಾರದ ಯೋಜನೆಗಳ ಸಮಸ್ಯೆಗಳಿದ್ದಲ್ಲಿ ಮನವಿ ಸಲ್ಲಿಸಿದಲ್ಲಿ ಸಾಧ್ಯವಾದವುಗಳನ್ನು ಇಲ್ಲಿಯೇ ಪರಿಹರಿಸಲಾಗುವುದು,ಕೆಲವು ಸಮಸ್ಯೆಗಳಿಗೆ ಆಡಳಿತಾತ್ಮಕವಾಗಿ ಪರಿಹರಿಸಲಾಗುವುದು ಎಂದು ತಿಳಿಸಿ ಸರಕಾರದ ಯೋಜನೆಗಳನ್ನು ತಾವೆಲ್ಲರು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕರು ತಮ್ಮ ಸಮಸ್ಯೆಗಳ ಮನವಿಯನ್ನು ಸಲ್ಲಿಸಿದರು ಹಾಗೂ ಅನೇಕರಿಗೆ ಇದೇ ಸಂದರ್ಭದಲ್ಲಿ ಸರಕಾರ ವಿವಿಧ ಯೋಜನೆಗಳಾದ ವಿಧವಾ ವೇತನ,ಹಿರಿಯ ನಾಗರಿಕರ ಭತ್ಯೆ ಹಾಗೂ ವಿಕಲಚೇತನರ ಮಾಸಿಕ ಭತ್ಯೆಯ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ತಾ.ಪಂ ಇಒ ಚಂದ್ರಶೇಖರ ಪವಾರ್,ಕಂದಾಯ ನಿರೀಕ್ಷಕ ರೇವಪ್ಪ ತೆಗ್ಗಿನ್,ವಿಠ್ಠಲ್ ಬಂದಾಳ,ಅಕ್ಷರದಾಸೋಹ ಎಡಿ ಮೌನೇಶ ಕಂಬಾರ ಸೇರಿದಂತೆ ಸ್ಥಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಅನೇಕ ಮುಖಂಡರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.