ಶಹಾಬಾದ :ನಗರಕ್ಕೆ ಬಸವಣ್ಣನವರ ಪ್ರತಿಮೆ ಬಂದಿರುವುದು ಸ್ವಾಗತಾರ್ಹ. ಸಮಾನತೆಯ ತಳಹದಿಯ ಮೇಲೆ ಸುಂದರ ಸಮಾಜದ ನಿರ್ಮಾಣ ಮಾಡಿದವರು ಬಸವಣ್ಣನವರು.ಅಂತಹ ಮೇರು ವ್ಯಕ್ತಿತ್ವವನ್ನು ಹೊಂದಿರುವ ಅಣ್ಣ ಬಸವಣ್ಣನವರ ಮೂರ್ತಿ ನಗರದಲ್ಲಿ ಸ್ಥಾಪನೆಯಾಗಬೇಕೆಂದು ಎಲ್ಲಾ ಸಮಾಜದವರ ಕನಸಾಗಿತ್ತು.ಅದು ನನಸುಗೊಳ್ಳುವ ಹಂತದಲ್ಲಿದೆ ಎಂದು ನಗರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕಾಶಿನಾಥ ಜೋಗಿ ತಿಳಿಸಿದ್ದಾರೆ.
ಬಸವಣ್ಣನವರ ಪ್ರತಿಮೆಯ ಜತೆಗೆ ಕನಕದಾಸರ ಪ್ರತಿಮೆಯೂ ಜೇವರ್ಗಿ ವೃತ್ತದಲ್ಲಿ ಸ್ಥಾಪನೆಯಾಗಬೇಕೆಂದು ನಮ್ಮೆಲ್ಲರ ಬಯಕೆ ಇದೆ. ಅದಕ್ಕಾಗಿ ಅನೇಕ ಬಾರಿ ಕುರುಬ ಸಮಾಜದವರು ಈ ಬಗ್ಗೆ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಆದರೆ ಸ್ಥಾಪನೆ ಸ್ಥಳವನ್ನು ನಿಗದಿಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಶಾಸಕರು ಮುತುರ್ಜಿ ವಹಿಸಿ ಸ್ಥಳವನ್ನು ಒದಗಿಸಿ ಕೊಡುತ್ತಾರೆ ಎಂಬ ಆಶಾಭಾವನೆ ಜನರಲ್ಲಿದೆ.ಅಲ್ಲದೇ ನಗರಸಭೆಯಲ್ಲಿ ಸುಮಾರು ವರ್ಷಗಳಿಂದ ಮಹಾತ್ಮ ಗಾಂಧೀಜಿ, ಲಾಲಬಹಾದ್ದೂರ ಶಾಸ್ತ್ರಿ ಧೂಳು ಮೂರ್ತಿ ತಿನ್ನುತ್ತಿರುವುದು ನೋಡಿದರೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ಪುರುಷರಿಗೆ ಅಪಮಾನ ಮಾಡಿದಂತಾಗುತ್ತದೆ.ಆ ಮಹಾನ್ ಪುರುಷರ ಮೂರ್ತಿಗಳನ್ನು ಯಾವಾಗ ಸ್ಥಾಪನೆ ಮಾಡಲಾಗುತ್ತದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಬೇಕಿದೆ.
ಬಸವಣ್ಣನವರ ಮೂರ್ತಿ ಸ್ಥಾಪನೆಯಾಗಲು ಎಲ್ಲಾ ಸಮಾಜದ ಬಂಧುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.ಅದರಲ್ಲೂ ನಗರಸಭೆಯ ಎಲ್ಲಾ ಪದಾಧಿಕಾರಿಗಳ ಸಹಕಾರ , ವೀರಶೈವ ಸಮಾಜದ ಅಧ್ಯಕ್ಷರಾಗಿದ್ದ ದಿ. ಸಂತೋಷಕುಮಾರ ಇಂಗಿನಶೆಟ್ಟಿ ಅವರ ಪ್ರಯತ್ನ ಹಾಗೂ ಹಳೆಶಹಬಾದ ಬಸವ ಅಭಿಮಾನಿಗಳ ಕಾರ್ಯ ಮರೆಯುವಂತಿಲ್ಲ. ಈಗಾಗಲೇ ನಗರಸಭೆಯ ಸಾಮನ್ಯ ಸಭೆಯಲ್ಲಿ ಸರ್ವ ಸದಸ್ಯರು ಹಾಗೂ ಸಮಾಜದ ಮುಖಂಡರು ಸಿದ್ಧರಾಮೇಶ್ವರ ಹಾಗೂ ಸಂತ ಸೇವಾಲಾಲ ಮೂರ್ತಿಯ ಸ್ಥಾಪನೆಗೂ ಬೇಡಿಕೆಗಳು ಕೇಳಿ ಬಂದಿದ್ದು, ಅವುಗಳ ಸ್ಥಾಪನೆಗೂ ಮುಂದಾಗಬೇಕೆಂದು ಒತ್ತಾಯಿದ್ದಾರೆ.