-
ತಾಲೂಕು ಪಂಚಾಯತಿ ಮುಂದೆ ಕೃಷಿ ಕೂಲಿಕಾರರ ಪ್ರತಿಭಟನೆ
ಸುರಪುರ: ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ದಿಂದ ನಗರದ ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘದ ಅಧ್ಯಕ್ಷ ದೌಲಸಾಬ್ ನದಾಫ್ ಮಾತನಾಡಿ,ನೂರಾರು ಸಂಖ್ಯೆಯಲ್ಲಿ ಭಾಗವಹಿಸಿರುವ ನಾವು ಯಾರದೋ ಮನೆಯ ಆಸ್ತಿಯನ್ನು ಕೊಡಿ ಎಂದು ಕೇಳಲು ಬಂದಿಲ್ಲ,ನಮಗೆ ಯಾವುದೇ ಕಳ್ಳ ಮಾರ್ಗದ ಹಣ ಕೊಡಿ ಎಂದು ಕೇಳುತ್ತಿಲ್ಲ,ಭ್ರಷ್ಟಾಚಾರ ಮಾಡಿದ್ದರಿಂದ ಬಂದಿರುವ ಹಣ ಕೊಡಿ ಎಂದು ಕೇಳುತ್ತಿಲ್ಲ,ನಾವು ಕೇಳುತ್ತಿರುವುದು ಸರಕಾರ ಜಾರಿಗೊಳಿಸಿರುವ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸ ಕೇಳುತ್ತಿದ್ದೇವೆ ಇದಕ್ಕೆ ಅಧಿಕಾರಿಗಳು ಸ್ಪಂಧಿಸದಿದ್ದಲ್ಲಿ ನಮ್ಮ ಬೇಡಿಕೆ ಈಡೇರುವ ವರೆಗೂ ಪ್ರತಿಭಟನೆ ನಿರಂತರಗೊಳಿಸೋಣ ಎಂದರು.ಕೂಡಲೇ ತಾಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ ಪವಾರ್ ಮನವಿಯನ್ನು ಸ್ವೀಕರಿಸಿ ನಿಮ್ಮೆಲ್ಲ ಬೇಡಿಕೆ ಈಡೇರಿಸಲಾಗುವುದು,ಎಲ್ಲೆಡೆ ಉದ್ಯೋಗ ಖಾತ್ರಿ ಕೆಲಸ ಆರಂಭಿಸಲಾಗಿದೆ,ಕೆಲ ದಿನಗಳಿಂದ ಮಳೆ ಇರುವುದರಿಂದ ನಿಲ್ಲಿಸಲಾಗಿದೆ ಶೀಘ್ರವೆ ಕೆಲಸ ಆರಂಭಿಸಲಾಗುವುದು ಮತ್ತು ಜಾಬ್ ಕಾರ್ಡ್‍ಗಳಿಗೆ ಆಧಾರ ಲಿಂಕ್ ಮಾಡಿಸಲಾಗುವುದು ಮತ್ತು ಇತರೆ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಧರಣಿಯನ್ನು ನಿಲ್ಲಿಸಲಾಯಿತು.
ಇದಕ್ಕು ಮುನ್ನ ನಗರದ ಡಾ:ಬಿ.ಆರ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಪಂಚಾಯಿತಿ ವರೆಗೂ ನೂರಾರು ಸಂಖ್ಯೆಯ ಕೂಲಿಕಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಶರಣಬಸವ ಜಂಬಲದಿನ್ನಿ,ರಾಜೇಂದ್ರಕುಮಾರ ಬಡಿಗೇರ,ಬಸವರಾಜ ಗುಡಗುಂಟಿ,ಹೈಯಾಳಪ್ಪ ದೊಡ್ಮನಿ ಸೇರಿದಂತೆ ನೂರಾರು ಸಂಖ್ಯೆಯ ಮಹಿಳಾ ಕೂಲಿಕಾರರಿದ್ದರು.