ಕಲಬುರಗಿ: ಸಾರಿಗೆ ಬಸ್ ಪಲ್ಟಿ | 30ಕ್ಕೂ ಹೆಚ್ಚು ಜನರಿಗೆ ಗಾಯ

0
987

ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ತಾಲೂಕಿನ ಶಂಕರವಾಡಿ ಕಾಗಿಣಾ ನದಿಗೆ ಬಿದ್ದಿದ್ದು, ಬಸ್ಸಿನಲ್ಲಿದ್ದ ಸುಮಾರು 43 ಜನ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಚಿತ್ತಾಪೂರ ಘಟಕಕ್ಕೆ ಸೇರಿದ್ದ ಬಸ್ ಜೇವರ್ಗಿಯಿಂದ ಶಹಾಬಾದ ಬಸ್ ನಿಲ್ದಾಣಕ್ಕೆ ಬಂದಿತ್ತು.ನಂತರ ಶಹಾಬಾದ ಬಸ್ ನಿಲ್ದಾಣದಿಂದ ಚಿತ್ತಾಪುರಕ್ಕೆ ಪ್ರಯಾಣ ನಡೆಸುತ್ತಿದ್ದ ಸಾರಿಗೆ ಬಸ್, ಕಾಗಿಣಾ ಸೇತುವೆ ಮೇಲೆ  ಪ್ರವೇಶಿಸುವ ಸಂದರ್ಭದಲ್ಲಿಯೇ ಎಕ್ಸೆಲ್ ಕಟ್ ಆಗಿ ಆಯತಪ್ಪಿ ಉರುಳಿ ಸೇತುವೆ ಮೇಲಿಂದ ಹೊಲದಲ್ಲಿ ಬಿದ್ದಿದೆ. ಅದೃಷ್ಟವಶ ಸೇತುವೆಯ ಮಧ್ಯದಲ್ಲಿ ಬಿದ್ದಿದ್ದರೆ ಭಾರಿ ಪ್ರಮಾಣದಲ್ಲಿ ಜೀವ ಹಾನಿ ಸಂಭವಿಸುವ ಸಾಧ್ಯತೆಯಿತ್ತು. ಆದರೆ ಬಸ್ ಸೇತುವೆ ಪ್ರಾರಂಭದಲ್ಲಿಯೇ ಬಲ ಭಾಗದ ಹೊಲದಲ್ಲಿ ಉರುಳಿ ಬಿದ್ದ ಪರಿಣಾಮ ಪ್ರಾಣಾಪಾಯ ತಪ್ಪಿದೆ.

Contact Your\'s Advertisement; 9902492681

ಬಿದ್ದ ಪರಿಣಾಮ ಬಸ್‍ನಲ್ಲಿದ್ದ ಪ್ರಯಾಣಿಕರು ಭಯಬೀತರಾಗಿ .ಕಿಟಕಿ ಗಾಜುಗಳನ್ನು ಒಡೆದು ಹೊರ ಬಂದಿದ್ದಾರೆ. ಸ್ಥಳದಲ್ಲಿದ್ದ ವಿವಿಧ ವಾಹನಗಳ ಸಾರ್ವಜನಿಕರು ಪ್ರಯಾಣಿಕರ ಸಹಾಯಕ್ಕೆ ಬಂದಿದ್ದಾರೆ. ಪುರುಷರು-21, ಸ್ತ್ರೀಯರು-19, ಮಕ್ಕಳು-03 ಜನ ಸೇರಿದಂತೆ ಒಟ್ಟು 43 ಪ್ರಯಾಣಿಕರಿದ್ದರು. ಇದರಲ್ಲಿ ನಾಲ್ಕು ಜನರಿಗೆ ಗಂಬೀರ ಸ್ವರೂಪದ ಗಾಯಗಳಾಗಿವೆ. ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಅದರಲ್ಲಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 09 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಉಳಿದ ಜನರಿಗೆ ಅಂಬುಲೆನ್ಸ್ ಮೂಲಕ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕಳಿಸಿ ಕೊಡಲಾಗಿದೆ.

ಶಹಾಬಾದ್ ಮೂಲದ ಬಸ್ ಚಾಲಕ ಶಂಕರ ಮತ್ತು ನಿರ್ವಾಹಕ ಶ್ರೀನಿವಾಸ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಇಬ್ಬರಿಗೆ ಕಾಲಿನ ಹಾಗೂ ಕೈ ಮೂಳೆ ಮುರಿತಗೊಂಡಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಗರ ಪಿಐ ರಾಘವೇಂದ್ರ , ಪಿಎಸ್‍ಐ ಅಶೋಕ ಪಾಟೀಲ ಹಾಗೂ ಸಿಬ್ಬಂದಿಗಳು ಗಾಯಾಳುಗಳ ನೆರವಿಗೆ ಬಂದಿದ್ದಾರೆ.ಈ ಘಟನೆಯಿಂದ ಸೇತುವೆ ಮೇಲೆ ಸುಮಾರು 1 ಗಂಟೆ ಕಾಲ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಅಲ್ಲದೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಹಸೀಲ್ದಾರ ಸುರೇಶ ವರ್ಮಾ, ತಾಲೂಕಾ ಆರೋಗ್ಯ ಅಧಿಕಾರಿ ಅಮರದೀಪ ಪವಾರ ಬೇಟಿ ನೀಡಿ ಮಾಹಿತಿ ಪಡೆದರು. ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಟ್ಟರು.

ಘಟನೆಯ ವಿಷಯ ತಿಳಿದು ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಹಾಗೂ ಅರವಿಂದ ಚವ್ಹಾಣ ಬೇಟಿ ನೀಡಿ ಗಾಯಾಳುಗಳಿಗೆ ಧರ್ಯ ತುಂಬಿದರಲ್ಲದೇ, ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಮನವಿ ಮಾಡಿದರು.
ಡಾ.ದೀಪಕ್ ಪಾಟೀಲ ವಾಡಿಯಲ್ಲಿ ಐಸಿಟಿಸಿ ಆರೋಗ್ಯ  ಜಾಗೃತಿ ಕ್ಯಾಂಪ್ ಮುಗಿಸಿ ಬರುತ್ತಿದ್ದ ವೇಳೆ ವಾಹನಗಳು ರಸ್ತೆಯಲ್ಲಿ ನಿಂತಿದನ್ನು ಕಂಡು, ಕಾರನಿಂದ ಹೊರಗೆ ಬಂದಾಗ ಜನರು ಅಳುತ್ತಿರುವ, ಕಿರಿಚಾಡುವ ಶಬ್ಧ ಕೇಳಿ ಸ್ವಲ್ಪ ಮುಂದೆ ನೋಡಿದಾಗ ಬಸ್ ಸುಮಾರು 10 ಅಡಿ ಕೆಳಗೆ ಹೊಲದಲ್ಲಿ ಬಿದಿದ್ದನ್ನು ಗಮನಿಸಿ ತಕ್ಷಣವೇ ಡಿಹೆಚ್‍ಓ ಗಮನಕ್ಕೆ ತಂದಿದ್ದಾರೆ.ಅಲ್ಲದೇ ತಕ್ಷಣವೇ ಅಂಬುಲೆನ್ಸ್ ತರಿಸಿ ಗಾಯಾಳುಗಳನ್ನು ಬೇಗನೆ ಜಿಲ್ಲಾ ಆಸ್ಪತ್ರೆಗೆ ಕಳಿಸುವಲ್ಲಿ ನೆರವಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here