ಕಲಬುರಗಿ: ಕಾಲುಬಾಯಿ ರೋಗವನ್ನು ತಡೆಗಟ್ಟಲು ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಕಡ್ಡಾಯವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗದಿಂದ ರಕ್ಷಿಸಲು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ ಅವರು ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅವರು ಇದೇ ನವೆಂಬರ್ 7 ರಿಂದ ಡಿಸೆಂಬರ್ 7 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಂಡ ಕಾಲುಬಾಯಿ ರೋಗ ವಿರುದ್ಧ ಲಸಿಕಾ ಅಭಿಯಾನದ ಕಾರ್ಯಕ್ರಮ ಕುರಿತು ಪೋಸ್ಟರ್‍ಗಳನ್ನು ಹಾಗೂ ಕರಪತ್ರಗಳನ್ನು ಬಿಡುಗೊಡೆಗೊಳಿಸಿ ಮಾತನಾಡಿದರು.
ರಾಜ್ಯದಲ್ಲಿ 2019 ರಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲೆಯ 918 ಗ್ರಾಮಗಳಲ್ಲಿ ಇದೇ ನವೆಂಬರ್ 7 ರಿಂದ ಡಿಸೆಂಬರ್ 7 ರವರೆಗೆ ಜಿಲ್ಲೆಯ 385580 ದನ ಹಾಗೂ 73176 ಎಮ್ಮೆಗಳಿಗೆ ಕಾಲುಬಾಯಿ ರೋಗ ವಿರುದ್ಧ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲಾ ರೈತರು ಅಭಿಯಾನದಲ್ಲಿ ಭಾಗವಹಿಸಿ ಕಾಲುಬಾಯಿ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಎಸ್.ಡಿ. ಅವಟಿ, ಸಹಾಯಕ ನಿರ್ದೇಶಕರುಗಳಾದ ಡಾ. ಯಲಪ್ಪ ಇಂಗಳೆ, ಡಾ. ಸುಭಾಷ ಟಕ್ಕಳಕ್ಕಿ, ಜಿಲ್ಲಾ ನೋಡಲ್ ಅಧಿಕಾರಿ ಡಾ. ವೈಜನಾಥ ಮಮ್ಮಾಣಿ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.