ಕಲಬುರಗಿ: ಜಿಲ್ಲೆಯಾದ್ಯಂತ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಅತಿಕ್ರಮಕಾರರ ಸಮಗ್ರ ಮಾಹಿತಿ ಕಲೆ ಹಾಕಿ ನಿರ್ದಿಷ್ಟವಾಗಿ ಕನಿಷ್ಠ ೩ ಪ್ರಕರಣಗಳಲ್ಲಾದರು ಒತ್ತುವರಿ ತೆರವುಗೊಳಿಸುವ ಮೂಲಕ ಅತಿಕ್ರಮಕಾರರ ಮೇಲೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಿ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅವರು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಖಡಕ್ ಆದೇಶ ನೀಡಿದಾರೆ.
ಮಂಗಳವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಒತ್ತುವರಿ ತೆರವುಗೊಳಿಸುವ ಮುನ್ನ ಇಂದಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಾಳುವ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ, ಶ್ರೀಮಂತರ ಪ್ರಕರಣಗಳನ್ನು ಮೊದಲು ಕೈಗೆತ್ತಿಕೊಳ್ಳಿ. ತದನಂತರ ಉಳಿದ ಪ್ರಕರಣಗಳ ತೆರವಿಗೆ ಮುಂದಾಗಬೇಕು. ಒತ್ತುವರಿ ತೆರವುಗೊಳಿಸಿದ ನಂತರ ಕಾನೂನು ಪ್ರಕಾರ ಕೇಸ್ ದಾಖಲಿಸುವುದಲ್ಲದೇ ಈ ಕುರಿತು ವ್ಯಾಪಕ ಪ್ರಚಾರ ಸಹ ನೀಡಿ. ಹೀಗೆ ಮಾಡಿದಲ್ಲಿ ಉಳಿದವರು ಎಚ್ಚರಿಕೆಗೊಳ್ಳುತ್ತಾರೆ. ಜಿಲ್ಲೆಯಲ್ಲಿ ೧೧೬೨೫ ಎಕರೆ ಸರ್ಕಾರಿ ಜಮೀನು ಅತಿಕ್ರಮಣವಾಗಿರುವುದನ್ನು ಗುರುತಿಸಲಾಗಿದ್ದು, ಇದನ್ನು ವಶಕ್ಕೆ ಪಡೆಯುವುದು ಆಯಾ ತಹಶೀಲ್ದಾರರ ಜವಾಬ್ದಾರಿಯಾಗಿದೆ ಎಂದರು.
ಒತ್ತುವರಿ ಪ್ರಕರಣದಲ್ಲಿ ಆರಂಭದಲ್ಲಿಯೆ ತುಂಬಾ ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸಿದಲ್ಲಿ ಮುಂದೆ ಸಮಸ್ಯೆ ಜಟಿಲವಾಗುವುದನ್ನು ತಡೆಯಬಹುದಾಗಿದೆ. ಆರಂಭದಲ್ಲಿ ನಿರ್ಲಕ್ಷ್ಯ ವಹಿಸಿ ತದನಂತರ ಮೈಕೊಡವಿ ಕಾರ್ಯಪ್ರವೃತ್ತರಾಗುವುದು ಸರಿಯಾದ ಕ್ರಮವಲ್ಲ. ಒತ್ತುವರಿ ಪ್ರಕರಣದಲ್ಲಿ ೧೯೨(ಎ)ರಲ್ಲಿ ತಾಲೂಕಿನ ತಹಶೀಲ್ದಾರರಿಗೆ ಅಧಿಕಾರ ನೀಡಲಾಗಿದ್ದು, ಅದರಂತೆ ಕ್ರವಹಿಸಬೇಕು ಎಂದರು. ಬರ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಾಡಿಗೆ ಜಲಮೂಲದಿಂದ ಮತ್ತು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿದವರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ ಮತ್ತು ದ್ವಿ.ದ.ಸ. ಹುದ್ದೆಗಳನ್ನು ನಿಯಮಾನುಸಾರ ಭರ್ತಿಗೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸರ್ವೇ ಕಾರ್ಯ ಚುರುಕುಗೊಳಿಸಿ:- ಜಿಲ್ಲೆಯಲ್ಲಿ ೧೦೧ ಸರ್ವೇಯರ್‌ಗಳಿದ್ದರು ಪೋಡಿ ಮುಕ್ತ ಗ್ರಾಮಕ್ಕೆ ಸರ್ವೇಯರ್‌ಳಿಂದ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಡೆಯುತ್ತಿಲ್ಲ. ಬೇರೆ ಜಿಲ್ಲೆಗೆ ಹೋಲಿಸಿದಲ್ಲಿ ಸರ್ವೇ ಕಾರ್ಯ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಾದೇಶಿಕ ಆಯಕ್ತರು ಕೂಡಲೇ ಜಿಲ್ಲೆಯ ಎಲ್ಲಾ ಸರ್ವೇಯರ್‌ಗಳ ಸಭೆ ಕರೆದು ಸರ್ವೇ ಕಾರ್ಯ ಚುರುಕುಗೊಳಿಸುವಂತೆ ಸೂಚನೆ ನೀಡಬೇಕು. ಇಷ್ಠಾದರು ಸರ್ವೇ ಕಾರ್ಯ ವೇಗ ಪಡೆದುಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ಭೂ ಕಂದಾಯ ೧೯೬೪ ಕಲಂ ೯೪ (ಎ) ಮತ್ತು (ಬಿ) ಪ್ರಕಾರ ಸಾಗುವಳಿ ಭೂಮಿ ಒತ್ತುವರಿ ಸಕ್ರಮಕ್ಕೆ ಕೋರಿ ೨೫೩೩೦ ಅರ್ಜಿಗಳನ್ನು ಸಲ್ಲಿಸಿದ್ದು, ಇದೂವರೆಗೆ ೧೧೯೨೫ ಅರ್ಜಿ ವಿಲೇವಾರಿ ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸಿ ಕಾಯ್ದೆಯ ೯೪(ಸಿ)ರನ್ವಯ ಸ್ವೀಕೃತ ೧೩೮೨೫ರಲ್ಲಿ ೩೫೬೯ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕು ಚೀಟಿ ವಿತರಿಸಲಾಗಿದೆ. ಇನ್ನು ನಗರ-ಪಟ್ಟಣ ಪ್ರಕರಣಗಳಲ್ಲಿ ಕಾಯ್ದೆಯ ೯೪(ಸಿಸಿ) ರನ್ವಯ ಸ್ವೀಕೃತ ೧೩೮೧ರಲ್ಲಿ ೩೪ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸಭೆಗೆ ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದರು.
ನ್ಯಾಯಾಲಯ ಪ್ರಕರಣಗಳ ವಿಲೇವಾರಿ ವೇಗ ಹೆಚ್ಚಿಸಿ:- ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಹಂತದಲ್ಲಿ ಸಿವಿಲ್ ಪ್ರಕರಣಗಳ ಸಂಖ್ಯೆ ಹೆಚ್ಚು ಬಾಕಿ ಉಳಿದುಕೊಂಡಿದ್ದು, ಇವುಗಳ ವಿಲೇವಾರಿಯ ವೇಗ ಹೆಚ್ಚಿಸಿ ಎಂದರು. ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರ ಮಾತನಾಡಿ ಜಿಲ್ಲೆಯಲ್ಲಿ ಇದೂವರೆಗೆ ವಾಡಿಕೆಯಂತೆ ೨೯೧ ಮಿ.ಮೀ. ಮಳೆಯಾಗಬೇಕಿತ್ತು. ೨೪೧ ಮಿ.ಮೀ. ಮಳೆಯಾಗಿದೆ. ಬಿತ್ತನೆಗೆ ಯಾವುದೇ ತೊಂದರೆಯಿಲ್ಲ. ಜಿಲ್ಲೆಯಲ್ಲಿ ೭.೫೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿ ಇದೂವರೆಗೆ ೬.೭೬ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ೪.೩೬ ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ೧ ಲಕ್ಷ ಹೆಕ್ಟೇರ್ ಹೆಚ್ಚುವರಿ ತೊಗರಿ ಬಿತ್ತನೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
೨೦೧೮-೧೯ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ವರದಿಯಾದ ೬೩ ರೈತ ಆತ್ಮಹತ್ಯೆ ಪ್ರಕರಣದಲ್ಲಿ ಅರ್ಹ ೪೨ ಕುಟಂಬಗಳಿಗೆ ತಲಾ ೫ ಲಕ್ಷ ರೂ. ಗಳಂತೆ ೨.೧೦ ಕೋಟಿ ರೂ. ಪರಿಹಾರ ಮೊತ್ತವನ್ನು ಸಂತ್ರಸ್ತ ಕುಟಂಬಕ್ಕೆ ವಿತರಣೆ ಮಾಡಲಾಗಿದೆ. ೨೦೧೯-೨೦ನೇ ಸಾಲಿನಲ್ಲಿ ಇದೂವರಗೆ ೪ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರ ತಿಳಿಸಿದರು.
ಸಭೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಅಪರ ಜಿಲ್ಲಾಧಿಕಾರಿ ಬಿ.ಶರಣಪ್ಪ, ಕಲಬುರಗಿ ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ ಸೇರಿದಂತೆ ತಾಲೂಕಿನ ತಹಶೀಲ್ದಾರರು, ಇನ್ನಿತರ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.