ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡಿದ್ದಕ್ಕಿಂತ ಈಗ ಕೂಲಿ ಕೇಳುತ್ತಿರುವುದೇ ಜಾಸ್ತಿ ಎಂದು ಸಮಾಜಕಲ್ಯಾಣ ಸಚಿವ ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ನಗರದ ವಡ್ಡರಗಲ್ಲಿ ಬಡಾವಣೆಯಲ್ಲಿ ಏರ್ಪಡಿಸಲಾದ ಪ್ರಚಾರಸಭೆಯಲ್ಲಿ ಮಾತನಾಡಿ, ರೈತರ ಸಾಲ ಮನ್ನಾ ಮಾಡಲಿಲ್ಲ. ಯುವಕರಿಗೆ ಉದ್ಯೋಗ ಕೊಡಲಿಲ್ಲ, ವಿದೇಶದಿಂದ ಕಪ್ಪುಹಣ ವಾಪಸ್ ತರಲಿಲ್ಲ, 15 ಲಕ್ಷ ಹಣ ಜನರ ಅಕೌಂಟ್ ಗೆ ಹಾಕಲಿಲ್ಲ, ಭಯೋತ್ಪಾದನೆ ನಿರ್ಮೂಲನೆ ಮಾಡಲಿಲ್ಲ ಇಷ್ಟೆಲ್ಲ ಇಲ್ಲಗಳ ನಡುವೆ ಈಗ ಮೋದಿ ಓಟು ಕೇಳುತ್ತಿದ್ದಾರೆ ಅದ್ಹೇಗೆ ಹುಸಿ ಸುಳ್ಳು ಹೇಳುವ ಮೂಲಕ ಎಂದು ಟೀಕಿಸಿದರು. ಆದರೆ, ಅವರು ನಿಷ್ಠೆಯಿಂದ ಮಾಡಿದ್ದೇನೆಂದರೆ ನೀರವ್ ಮೋದಿಯಂತವರು ಸಾವಿರಾರು ಕೋಟಿ ಹಣ ಲೂಟಿ ಮಾಡುವಾಗ ಸುಮ್ಮನೆ ಇದ್ದು ವಿದೇಶಕ್ಕೆ ಪರಾರಿಯಾಗುವಂತೆ ಅನುಕೂಲ ಮಾಡಿಕೊಟ್ಟಿದ್ದು ಎಂದು ವ್ಯಂಗ್ಯವಾಡಿದರು.
ರಾಜ್ಯದ ಸಮ್ಮಿಶ್ರ ಸರಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಿದ ಅಭಿವೃದ್ದಿಗಾಗಿ ರೂ 24,000 ಕೋಟಿ ತೆಗೆದಿರಿಸಿದೆ. ಈ ಹಣದಿಂದ ಅಭಿವೃದ್ದಿ ಕಾರ್ಯ ಮಾಡಲು ಬದ್ದವಿರುವುದಾಗಿ ಅವರು ಹೇಳಿದರು. ಉಮೇಶ್ ಜಾಧವ್ ಬಿಜೆಪಿ ಸೇರಿ ಈಗ ಚುನಾವಣೆಗೆ ನಿಂತಿದ್ದಾರೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಚಿಂಚೋಳಿ ಜನರಿಗೆ ಮೋಸ ಮಾಡಿ ಖರ್ಗೆ ಸಾಹೇಬರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಸ್ವತಃ ಅವರು ಕ್ಷೇತ್ರದ ಅಭಿವೃದ್ದಿಗೆ ಏನು ಮಾಡಿದ್ದಾರೆ ಎನ್ನುವುದನ್ನು ಮತ ಕೇಳುವ ಮುನ್ನ ಜನರಿಗೆ ತಿಳಿಸಲಿ ಎಂದು ಸವಾಲೆಸೆದರು.
ಈ ಭಾಗದ ಅಭಿವೃದ್ದಿ ಗಾಗಿ ಖರ್ಗೆ ಸಾಹೇಬರು ಮಾಡಿದ ಅಭಿವೃದ್ದಿ ಕೆಲಸವನ್ನು ನೋಡಿ ನೀವು ಮತ ನೀಡಿ ಎಂದು ಮನವಿ ಮಾಡಿದರು. ವೇದಿಕೆಯ ಮೇಲೆ ಅಲ್ಲಮ ಪ್ರಭು ಪಾಟೀಲ್ ಸೇರಿದಂತೆ ಮತ್ತಿತರಿದ್ದರು.