ಸುರಪುರ: ಸರಕಾರ ಐಸಿಸಿ ಸಭೆಯಲ್ಲಿ ಘೋಷಣೆ ಮಾಡಿದಂತೆ ಡಿಸೆಂಬರ್ 12 ರಿಂದ ಮಾರ್ಚ್ 30ರ ವರೆಗೆ ನೀರು ಹರಿಸಿದರೆ ರೈತರ ಬೆಳೆಗೆ ತೊಂದರೆಯಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಬೇಸರ ವ್ಯಕ್ತಪಡಿಸಿದರು.
ನಗರದ ಟೈಲರ್ ಮಂಜಿಲ್‍ನಲ್ಲಿ ಸಭೆ ನಡೆಸಿ ನಂತರ ಮಾತನಾಡಿದ ಅವರು,ಸರಕಾರ ತಮ್ಮಿಷ್ಟ ಬಂದಂತೆ ನಿಯಮ ಮಾಡಿದರೆ ರೈತರಿಗೆ ಅನುಕೂಲವಾಗುವುದಿಲ್ಲ,ಕನಿಷ್ಠ ಏಪ್ರಿಲ್ 15ರ ವರೆಗೆ ನೀರು ಹರಿಸಿದರೆ ಮಾತ್ರ ಹಿಂಗಾರು ಬೆಳೆಗಳು ಕೈಗೆ ಬರಲಿವೆ ಇಲ್ಲವಾದಲ್ಲಿ ಸಂಕಷ್ಟವಾಗಲಿದೆ,ಅಲ್ಲದೆ ಜಲಾಶಯದಲ್ಲಿ ನೀರು ಇರುವ,ಇಲ್ಲದಿರುವ ಬಗ್ಗೆ ರೈತರಿಗೆ ಯಾವುದೇ ನೆಪ ಹೇಳದೆ ಜಲಾಶಯದಲ್ಲಿ ನೀರು ಕಡಿಮೆಯಾದರೆ ಬೇರೆ ಕಡೆಯಿಂದ ನೀರನ್ನು ತರುವ ಕೆಲಸ ಮಾಡುವ ಮೂಲಕ ರೈತರಿಗೆ ಅಗತ್ಯ ಇರುವಷ್ಟು ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಮತ್ತು ಈ ಬೆಂಬಲ ಬೆಲೆಯನ್ನು ಕಾನೂನುಗೊಳಿಸಿ ಜಾರಿಗೊಳಿಸಬೇಕು ಅಂದಾಗ ಸರಕಾರಗಳು ರೈತ ಪರ ಎನ್ನುವುದಕ್ಕೆ ಮತ್ತು ಸರಕಾರ ನಡೆಸುವವರು ನಾವು ರೈತರ ಮಕ್ಕಳು ಎಂದು ಹೇಳಿಕೊಳ್ಳುವುದಕ್ಕೆ ಅರ್ಥ ಬರಲಿದೆ,ಇಲ್ಲವಾದಲ್ಲಿ ಇವರ ಹೇಳಿಕೆಗಳು ಕೇವಲ ಮೊಸಳೆ ಕಣ್ಣೀರು ಸುರಿಸಿದಂತಾಗಲಿದೆ.
ಆದ್ದರಿಂದ ಸರಕಾರ ಕೂಡಲೇ ಈಗ ಮಾಡಿರುವ ಸಭೆಯಲ್ಲಿನ ಘೋಷಣೆ ರದ್ದುಗೊಳಿಸಿ ಏಪ್ರಿಲ್ 15ರ ವರೆಗೆ ನೀರು ಬಿಡುವುದಾಗಿ ಘೋಷಿಸಬೇಕು,ಇಲ್ಲವಾದಲ್ಲಿ ರೈತ ಸಂಘ ದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದಲಾಪುರ ಸೇರಿದಂತೆ ಅನೇಕರಿದ್ದರು.