ಪ್ರತಿ ವರ್ಷ 6ರಿಂದ 7 ಸಾವಿರ ಪುಸ್ತಕ ಪ್ರಕಟವಾಗುತ್ತಿವೆ. ಆದರೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಬಾಳಿನ ನಿಜವಾದ ಸಂಗಾತಿ ಒಂದು ಪುಸ್ತಕ ಇನ್ನೊಂದು ದೇವರು ಕೊಟ್ಟ ದೇಹ. ಎಲ್ಲ ಶಿಕ್ಷಣಕ್ಕಿಂತ ಮನವೀಯ ಶಿಕ್ಷಣ ಮೇಲು. ಯಾವುದೇ ರೋಗಿ ಚಿಕಿತ್ಸಗೆ ಬಂದಾಗ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಮತ್ತು ಆತನ ಆರ್ಥಿಕ ಪರಿಸ್ಥಿತಿ ನೋಡಿ ಚಿಕಿತ್ಸೆ ನೀಡಬೇಕು. – ಡಾ.ಸಿ.ಎನ್. ಮಂಜುನಾಥ, ಖ್ಯಾತ ಹೃದ್ರೋಗ ತಜ್ಞ, ಬೆಂಗಳೂರು.
ಕಲಬುರಗಿ: ಎಷ್ಟು ಓದಿದ್ದೇವೆ.ಎಷ್ಟು ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತ ಇತರ ಬಾಳಿನಲ್ಲಿ ಎಷ್ಟು ಬೆಳಕು ಚೆಲ್ಲಿದೆ ಎಂಬುದು ಬಹಳ ಮುಖ್ಯ ಎಂದು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ.ಸಿ.ಎನ್. ಮಂಜುನಾಥ ತಿಳಿಸಿದರು.
ಗುಬ್ಬಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಗರದ ಡಾ. ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡ ಡಾ. ಎಸ್.ಎಸ್. ಗುಬ್ಬಿ ಅವರು ರಚಿಸಿದ ವೈದ್ಯಾಮೃತ ಹಾಗೂ ಸಮಾಜ ದರ್ಶನ ಕೃತಿಗಳನ್ನು ಜನಾರ್ಪಣೆ ಮಾಡಿ ಮಾತನಾಡಿದ ಅವರು, ಬದುಕು ಕೂಡ ಒಂದು ಪುಸ್ತಕ ಇದ್ದ ಹಾಗೆ. ಮೊದಲ ಪುಟ ತಾಯಿ ಬರೆದರೆ ಕೊನೆಯ ಪುಟ ದೇವರು ಬರೆದಿರುತ್ತಾನೆ. ಇವುಗಳ ಮಧ್ಯದ ಪುಟಗಳನ್ನು ನಾವು ತುಂಬಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರ. ತಂತ್ರಜ್ಞಾನ, ಗಣಕೀರಣದಿಂದಾಗಿ ಸೋಮಾರಿತನ ಕೂಡ ಹೆಚ್ಚಾಗುತ್ತಿದೆ. ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಕಡಿಮೆಯಾಗುತ್ತಿದೆ. ಪರೀಕ್ಷೆಗಳನ್ನು ನಂಬಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸಾ ವ್ಯವಸ್ಥೇ ರೋಗಕ್ಕಿಂತ ಅಪಾಯಕಾರಿ ಆಗಬಾರದು. ಆಸ್ಪತ್ರೆಯಲ್ಲಿ ಸಿಗುವುದು ಮಾತ್ರ ಔಷಧ ಅಲ್ಲ. ನಮ್ಮ ಪರಿಸರದಲ್ಲೂ ಔಷಧವಿದೆ. ಸೂರ್ಯ, ವ್ಯಾಯಾಮ, ಆತ್ಮವಿಶ್ವಾಸ, ಗೆಳೆತನ, ನಗು ಇವುಗಳಲ್ಲೂ ಔಷಧವಿದೆ ಎಂದರು.
ಒತ್ತಡದ ಜೀವನದಿಂದಾಗಿ ನಮ್ಮ ಜೀವನ ಶೈಲಿ ಕೂಡ ಬದಲಾಗಿದೆ. 60 ರಷ್ಟು ಹೃದಯ ಕಾಯಿಲೆ, ರಕ್ತದೊತ್ತಡ, ಪಾಶ್ರ್ವವಾಯು, ಕ್ಯಾನ್ಸರ್, ಶ್ವಾಸಕೋಶಕ್ಕೆ ಸಂಬಂಧಿದ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ 2030ರಲ್ಲಿ ವಿಶ್ವದ ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆಯ ರಾಜಧಾನಿ ಭಾರತ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಹುಮುಖ ವ್ಯಕ್ತಿತ್ವದ ಡಾ. ಗುಬ್ಬಿ ಅವರು ಬಡ ರೋಗಿಗಳಿಗೆ ಉಚಿತ ಸೇವೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 180 ಕೋಟಿ ರೂ.ನೀಡಲಾಗಿದೆ. ಕೆಲವೇ ತಿಂಗಳಲ್ಲಿ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಉದ್ಘಾಟನೆ ಆಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುವಿಖ್ಯಾತ ವೈದ್ಯ ಡಾ. ಪಿ.ಎಸ್. ಶಂಕರ ಮಾತನಾಡಿ, ಸೈನಿಕರು ಮಾಜಿ ಆಗುವುದಿಲ್ಲ. ಕನ್ನಡ ಭಾμÉಯಲ್ಲಿ ವೈದ್ಯಕೀಯ ಶಿಕ್ಷಣ ಕೊಡುವುದು ಸಾಧ್ಯ ಮತ್ತು ಅಸಾಧ್ಯ ಎಂದು ಅದರ ತೊಡಕುಗಳನ್ನು ವಿವರಿಸಿದರು.
ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಹಿರೇಮಠದ ಡಾ. ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು. ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ ವೇದಿಕೆಯಲ್ಲಿದ್ದರು. ಬಿ.ಎಚ್.ನಿರಗುಡಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಕೆಂಗನಾಳ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಎಸ್. ಹಿರೇಮಠ ಪ್ರಸ್ತಾವಿಕ ಮಾತನಾಡಿದರು.