ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗದ ಕಲ್ಯಾಣಕ್ಕೆ ಶಕ್ತಿ ತಂದ 371 ಜೆ ವಿಶೇಷ ಸ್ಥಾನಮಾನಕ್ಕೆ 10 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡಿ.10 ರಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಇಂದು ನಮ್ಮ ಎಲ್ಲಾ ನಾಯಕರ ಜತೆ ಚರ್ಚೆ ಮಾಡಲಾಗಿದೆ. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಅವರು ತಮ್ಮ ರಾಜಕೀಯ ಜೀವನದಲ್ಲಿ ಅತಿ ದೊಡ್ಡ ಸಾಕ್ಷಿ ಗುಡ್ಡೆ ಹಾಕಿದ್ದಾರೆ. ಆ ಮೂಲಕ ಈ ಭಾಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತಮ್ಮ ಜನ್ಮ ಭೂಮಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಖರ್ಗೆ ಅವರು ಸಂವಿಧಾನ ತಿದ್ದುಪಡಿ ಮೂಲಕ ಈ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತಂದರು. ಹೀಗಾಗಿ ನಾವು ಅವರಿಗೆ ಅಭಿನದನೆ ಸಲ್ಲಿಸಬೇಕು. ಇಂತಹ ಹಲವು ಹೋರಾಟಗಳ ಮೂಲಕ ಇಂದು ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಮ್ಮ ನಾಯಕರಿಗೆ ಕೆಲವು ಮಾರ್ಗದರ್ಶನ ನೀಡಲು ಇಲ್ಲಿಗೆ ಬಂದಿದ್ದೇವೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೈತ್ರಿ ಸರ್ಕಾರದ ರೀತಿ ಕೆಲಸ ಮಾಡುತ್ತಿದೆ. ಈ ಭಾಗದಿಂದ ಹೆಚ್ಚಿನ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ಭಾಗದ ಜನರ ಮೇಲೆ ದ್ವೇಷದ ಮನೋಭಾವ ತೋರುತ್ತಿದೆ. ಹೀಗಾಗಿ ಈ ಭಾಗದ ಅಭಿವೃದ್ಧಿಗೆ ಬೇಕಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ನಮ್ಮ ನಾಯಕರು ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ.
ಸರ್ಕಾರದ ತಪ್ಪುಗಳನ್ನು ನಾವು ತೋರಿಸಿ, ಅವರು ಎಲ್ಲಿ ತಿದ್ದಿಕೊಳ್ಳಬೇಕು ಎಂದು ತೋರಿಸಬೇಕಾದ ಅಗತ್ಯವಿದೆ. ನಮ್ಮ ಪಕ್ಷದ ಉದ್ದೇಶ ಜನರ ಬದುಕು ಸುಧಾರಣೆ ಕಾಣುವುದು. ಬಿಜೆಪಿ ಅವರ ಉದ್ದೇಶ ಭಾವನೆಗಳ ಮೇಲೆ ರಾಜಕೀಯ ಮಾಡುವುದು. ಭಾವನೆ ಹಾಗೂ ಬದುಕಿನ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಬಿಜೆಪಿ ಭಾವನಾತ್ಮಕ ವಿಷಯಗಳಿಗೆ ಒತ್ತು ನೀಡಿದರೆ, ನಾವು ಜನರ ಬದುಕಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸಲು ಈ ಬೃಹತ್ ಕಾರ್ಯಕ್ರಮವನ್ನು ನಮ್ಮ ಎಲ್ಲಾ ನಾಯಕರು ರೂಪಿಸಿದ್ದಾರೆ.