ಕಲಬುರಗಿ: ಸಹಕಾರಿ ರಂಗದ ಅಗ್ರಗಣ್ಯ ಬ್ಯಾಂಕಾಗಿರುವ ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಪ್ರಸಕ್ತವಾಗಿ ಠೇವಣಿ ( ಫಿಕ್ಸ್ ಡಿಪಾಸಿಟ್) ಮೇಲೆ ಆಕರ್ಷಕ ಬಡ್ಡಿ ನೀಡುವ ಯೋಜನೆ ಜಾರಿಗೆ ತಂದಿದೆ.
ಬ್ಯಾಂಕ್ ನಲ್ಲಿ ಠೇವಣಿ ಒಡುವ ಗ್ರಾಹಕರಿಗೆ ಶೇ. 8.5% ಬಡ್ಡಿ ನೀಡುವ ಮಹೋನ್ನತ ಯೋಜನೆ ಜಾರಿಗೆ ತರಲಾಗಿದ್ದು, ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವಂತಾಗಿದೆ.
ಬ್ಯಾಂಕ್ ಪ್ರಸಕ್ತವಾಗಿ 19 ಕೋ.ರೂ ಲಾಭ ಗಳಿಸಿದೆ. ಹೀಗಾಗಿ ಠೇವಣಿ ಇಡುವ ಗ್ರಾಹಕರಿಗೆ ಲಾಭ ಮಾಡಿಕೊಡಲು ಬ್ಯಾಂಕ್ ಮುಂದಾಗಿದೆ. ಇದೇ ಕಾರಣಕ್ಕೆ ಠೇವಣಿ ಮೇಲೆ ಹೆಚ್ಚಿನ ಬಡ್ಡಿ ದರ ನೀಡುವ ಐತಿಹಾಸಿಕ ಕ್ರಮ ಜಾರಿಗೆ ತರಲಾಗಿದೆ.
ಬ್ಯಾಂಕ್ ರೈತರ ಹಾಗೂ ಅಪೆಕ್ಸ್ ಬ್ಯಾಂಕ್, ನಬಾರ್ಡ್ ವಿಶ್ವಾಸ ಗಳಿಸಿದ್ದರಿಂದ ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಗೆ ಇಲ್ಲಿಯವರೆಗೆ 375 ಕೋ.ರೂ ಠೇವಣಿ ಹರಿದು ಬಂದಿದೆ. ಬರುವ ಮಾರ್ಚ 2023ರ ಮಾರ್ಚ್ ಅಂತ್ಯದವರೆಗೆ 600 ಕೋ.ರೂ ಠೇವಣಿ ಹೊಂದುವ ಬಗ್ಗೆ ನಿರೀಕ್ಷೆ ಹೊಂದಲಾಗಿದೆ ಎಂದಿದ್ದಾರೆ.
ಬ್ಯಾಂಕ್ ನ ಸರ್ವ ಸಿಬ್ಬಂದಿ, ಆಡಳಿತ ವರ್ಗ ಅದರಲ್ಲೂ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ನವಾರ್ಡ, ಅಫೆಕ್ಸ್ ಬ್ಯಾಂಕ್ ಸಹಾಯ ಹಸ್ತದಿಂದ ಬ್ಯಾಂಕ್ ಅಭಿವೃದ್ಧಿ ಯತ್ತ ಧಾಪುಗಾಲು ಹಾಕಲು ಸಾಧ್ಯವಾಗಿದೆ. ಇದೇ ಕಾರಣ ಠೇವಣಿ ಬರಲು ಕಾರಣವಾಗಿದೆ. ಹೀಗಾಗಿ ಬ್ಯಾಂಕ್ ನ ಲಾಭವು ಠೇವಣಿ ಇಡುವ ಗ್ರಾಹಕರಿಗೂ ತಲುಪಲಿ ಎಂಬ ಉದ್ದೇಶದಿಂದ ಠೇವಣಿ ಮೇಲಿನ ಬಡ್ಡಿ ಹೆಚ್ಚಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ ತೇಲ್ಕೂರ ತಿಳಿಸಿದ್ದಾರೆ.
ಬ್ಯಾಂಕ್ ನಿಂದ ಪ್ರಸಕ್ತವಾಗಿ ಸಾವಿರ ಕೋ.ರೂ ಸಮೀಪ ರೈತರಿಗೆ ಬಡ್ಡಿ ರಹಿತ ಬೆಳೆ ಸಾಲ ನೀಡಲಾಗಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ 50 ಕೋ. ರೂ ಸಾಲ ನೀಡಲಾಗಿದೆ. ಹೈನುಗಾರಿಗೆ ಸಾಲ ನೀಡುವುದನ್ನು ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಶಾಖೆಗಳನ್ನು ಪ್ರಾರಂಭಿಸುವುದು ಸೇರಿದಂತೆ ಹತ್ತಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿವರಿಸಿದ್ದಾರೆ.
ಎಲ್ಲರ ಸಹಕಾರ ಹಾಗೂ ಬೆಂಬಲದಿಂದ ಸೇಡಂದಲ್ಲಿ 69 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾವೇಶ ಯಶಸ್ವಿಯಾಗಿ ಹಾಗೂ ಮಾದರಿಯಾಗಿ ನೆರವೇರಿರುವುದು ತಮ್ಮೆಲ್ಲರಿಗೂ ತಿಳಿದ ವಿಷಯ. ಪ್ರಥಮ ಬಾರಿಗೆ ಅಖಿಲ ಭಾರತ ಸಹಕಾರಿ ಸಪ್ತಾಹದ ಉದ್ಘಾಟನೆ ನಮ್ಮಲ್ಲಿ ನಡೆಯಿತು. ಇದು ಬಹಳ ಹೆಮ್ಮೆ ತಂದಿದೆ. ಇದಕ್ಕೆಲ್ಲ ಎಲ್ಲರೂ ಕಾರಣರು ಎಂಬುದು ಉತ್ಸಾಹ ಇಮ್ಮಡಿಗೊಳಿಸಿದೆ ಎಂದಿದ್ದಾರೆ.
ಕಲಬುರಗಿ- ಯಾದಗಿರಿ ಸಹಕಾರಿ ಕೇಂದ್ರ ಬ್ಯಾಂಕ್ ಇಂದು ರಾಜ್ಯದ ಸಹಕಾರಿ ಕ್ಷೇತ್ರದ ಮುಂಚೂಣಿ ಜಿಲ್ಲೆ ಗಳ ಸಾಲಿಗೆ ಬಂದು ನಿಲ್ಲುತ್ತಿದೆ. ಹೀಗಾಗಿ ಈ ಭಾಗದ ಉದ್ಯಮಿಗಳು, ವ್ಯಾಪಾರೀಗಳು, ರೈತರು ಹಾಗೂ ಇತರೆಲ್ಲರೂ ಠೇವಣಿ ಇಡುವ ಮುಖಾಂತರ ತಾವು ಬಡ್ಡಿಯ ಲಾಭ ಪಡೆಯುವುದರ ಜತೆಗೆ ಬ್ಯಾಂಕ್ ನ ಏಳ್ಗೆಗೆ ಕೈ ಜೋಡಿಸಿ.- ರಾಜಕುಮಾರ ಪಾಟೀಲ್ ತೇಲ್ಕೂರ, ಶಾಸಕರು ಹಾಗೂ ಅಧ್ಯಕ್ಷರು, ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್.