ಕಲಬುರಗಿ: ಜಗತ್ತಿನ ಭೀಕರ ರೋಗಗಳಲ್ಲಿ ಒಂದಾದ ಏಡ್ಸ್ ರೋಗವು ವಿವಿಧ ಕಾರಣಗಳಿಂದ ಉಂಟಾಗುತ್ತಿದ್ದು ಅದಕ್ಕೆ ನಿರ್ಧಿಷ್ಟ ಔಷಧಿಯಿಲ್ಲ. ಅದಕ್ಕೆ ಮುನ್ನೆಚ್ಚರಿಕೆ, ಜಾಗೃತಿಯೇ ಮದ್ದಾಗಿದೆ. ಸರ್ಕಾರ, ಆರೋಗ್ಯ ಇಲಾಖೆ, ವೈದ್ಯರು, ಸಿಬ್ಬಂದಿ ಹಾಗೂ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ಎನ್.ಜಿ.ಓ.ಗಳು ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಅದಕ್ಕೆ ಎಲ್ಲಾ ಸಾರ್ವಜನಿಕರು ಸಹಕಾರ ನೀಡಿ, ಏಡ್ಸ್ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸುವುದು ಅಗತ್ಯವಾಗಿದೆ ಜೇವರ್ಗಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಂಬಾರಾಯ ಎನ್.ತಂಗಾ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ’, ‘ಜಿಲ್ಲಾ ಏಡ್ಸ್ ನಿಯಂತ್ರಣಾ ಮತ್ತು ತಡೆಗಟ್ಟುವ ಘಟಕ’ ಹಾಗೂ ‘ತಾಲೂಕಾ ಸಾರ್ವಜನಿಕ ಆಸ್ಪತ್ರೆ ಜೇವರ್ಗಿ’ ಇವುಗಳು ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ‘ವಿಶ್ವ ಏಡ್ಸ್ ದಿನಾಚರಣೆ’ಯ ಪ್ರಯುಕ್ತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ಎಆರ್‍ಟಿ ಮಹಾದೇವಿ ಮಾತನಾಡಿ, ಅಸುರಕ್ಷಿತ ಲೈಂಗಿಕ ಸಂಪರ್ಕ, ರೋಗ ಪೀಡಿತ ತಾಯಿಯಿಂದ ಮಗುವಿಗೆ ಪ್ರಸಾರ, ರೋಗಿ ಬಳಸಿದ ಬ್ಲೇಡ್, ಸೀರೆಂಜ ಬಳಸುವುದು ಸೇರಿದಂತೆ ಮತ್ತೀತರ ಕಾರಣಗಳಿಂದ ರೋಗ ಹರಡುತ್ತದೆ. ಆದರೆ ರೋಗಪೀಡಿತ ವ್ಯಕ್ತಿಯ ಜೊತೆ ಮಾತನಾಡುವದರಿಂದ, ಮುಟ್ಟುವದರಿಂದ, ಬಳಸಿದ ವಸ್ತುಗಳನ್ನು ಮುಟ್ಟುವದರಿಂದ, ಗಾಳಿ ತೆಗೆದುಕೊಳ್ಳುವದರಿಂದ ಈ ರೋಗ ಹರಡುವದಿಲ್ಲ. ಇದರ ಬಗ್ಗೆ ಅನಾವಶ್ಯಕವಾದ ಭಯ ಬೇಡ ಎಂದು ತಿಳಿಸಿದರು.
ಜಾಥಾದಲ್ಲಿ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಸಿದ್ದಾರೂಢ ಬಿರಾದಾರ, ದೇವೇಂದ್ರಪ್ಪ ಬಡಿಗೇರ್, ಸಾರ್ವಜನಿಕ ಆಸ್ಪತ್ರೆಯೆ ಸಿಬ್ಬಂದಿಗಳಾದ ಎಆರ್‍ಟಿ ದಯಾನಂದ, ಎಚ್‍ಐಓ ಅಲ್ತಫ್, ಲ್ಯಾಬ್ ಟೆಕ್ನಿಸಿಯನ್, ಮಲ್ಲಿನಾಥ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.