ಶಹಾಬಾದ: ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಕರ್ತವ್ಯಕ್ಕೆ ಸೇರಿ ಕೆಲವೇ ತಿಂಗಳಾಗಿಲ್ಲ ಅವರನ್ನು ವರ್ಗಾವಣೆ ಮಾಡಿರುವುದು ಖಂಡನೀಯ.ಈ ಹಿಂದೆ ನಗರಸಭೆಯ ಆಡಳಿತ ತುಂಬಾ ನಿಷ್ಕ್ರೀಯವಾಗಿತ್ತು.ಅಲ್ಲದೇ ಇಲ್ಲಿನ ಸಿಬ್ಬಂದಿಗಳು ತಾವು ಮಾಡಿದ್ದೆ ಕೆಲಸ ಮತ್ತು ಆಡಿದ್ದೆ ಆಟ ಎಂಬಂತಾಗಿತ್ತು.ಪ್ರತಿ ಕೆಲಸಕ್ಕೂ ಇಂತಿಷ್ಟು ನೀಡಿದರೇ ಸಲೀಸಾಗಿ ಸಾರ್ವಜನಿಕರ ಕಾರ್ಯವಾಗುತ್ತಿತ್ತು.
ಮುಟೇಷನ್ ಹಾಗೂ ಖಾತಾ ಪಡೆಯಲು ಜನರು ತಿಂಗಳುಗಟ್ಟಲೇ ಕಾಯಬೇಕಾಗಿತ್ತು.ಅಲ್ಲದೇ ದುಡ್ಡು ಕೊಟ್ಟರೇ ಮಾತ್ರ ಕೆಲಸವಾಗುವಂತ ಪರಿಸ್ಥಿತಿ ಇತ್ತು. ಇವೆಲ್ಲಕ್ಕೂ ಕಡಿವಾಣ ಹಾಕಿದ್ದರಿಂದ ಅವರಿಗೆ ಸಿಕ್ಕ ಬಹುಮಾನ ಇದಾಗಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲವೇ ಎಂಬಂತಾಗಿದೆ.ನಗರಸಭೆ ಪೌರಾಯುಕ್ತರನ್ನು ಈ ರೀತಿ ಮೇಲಿಂದ ಮೇಲೆ ವರ್ಗಾವಣೆ ಮಾಡುತ್ತ ಹೋದರೆ ಅಭಿವೃದ್ಧಿ ಕೆಲಸಗಳು ಹೇಗಾಗಬೇಕು.ಜನರ ಸಮಸ್ಯೆಗಳು ಹೇಗೆ ಬಗೆಹರಿಯಬೇಕು.
ಈಗಾಗಲೇ ನಗರಸಭೆಯ ಆಡಳಿತ ಸಂಪೂರ್ಣ ಹದಗೆಟ್ಟಿರುವುದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ಪೌರಾಯುಕ್ತರನ್ನು ವರ್ಗಾವಣೆಯನ್ನು ತಡೆದು ಉತ್ತಮ ಆಡಳಿತ ನೀಡಲು ಸಹಕರಿಸಲು ಶಾಸಕ ಬಸವರಾಜ ಮತ್ತಿಮಡು ಮುಂದಾಗಬೇಕೆಂದು ಡಾ.ರಶೀದ ಒತ್ತಾಯಿಸಿದ್ದಾರೆ.