ಕಲಬುರಗಿ: ಬೆಳಗಾವಿ ವಿಷಯದಲ್ಲಿ ಪದೇ ಪದೇ ತಗಾದೆ ತೆಗೆದು ಕನ್ನಡಿಗರಿಗೆ ಕೆಣಕುತ್ತಿರುವ ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ಕೂಡಲೇ ಹತ್ತಿಕ್ಕಬೇಕು.ರಾಜ್ಯದಲ್ಲಿ ಕೂಡಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ಗಡಿ ವಿಷಯದಲ್ಲಿ ಮಹಾರಾಷ್ಟ್ರ ಸರಕಾರದ ಸಚಿವರುಗಳು ನೀಚ ರಾಜಕಾರಣ ಮಾಡುತ್ತಿದ್ದಾರೆ ಭಾಷಾವಾರು ಪ್ರಾಂತ್ಯ ರಚನೆ ಆಗಿ ವರುಷಗಳೇ ಕಳೆದರೂ ಗಡಿ ವಿಚಾರದಲ್ಲಿ ವಿವಾದ ಹುಟ್ಟು ಹಾಕಿ ಕನ್ನಡಿಗರ ಸಹನೆ ಕೆಣಕುವ ದುಸ್ಸಾಹಸಕ್ಕೆ ಮಹಾರಾಷ್ಟ್ರ ಸರ್ಕಾರದ ಸಚಿವರು ಕೈ ಹಾಕಿರುವುದು ಖಂಡನೀಯ.ಬೆಳಗಾವಿಯಲ್ಲಿ ಮರಾಠಿಗರು ನೆಲಸಿರುವ ನೆಪದಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬುದು ಉದ್ಘಟತನ ಹೇಳಿಕೆಯಾಗಿದೆ.ಅಲ್ಲದೇ ಮಹಾಜನ್ ವರದಿಯನ್ನು ಧಿಕ್ಕರಿಸಿ ಮೊಂಡುತನ ಪ್ರದರ್ಶಿಸುತ್ತಿದ್ದಾರೆ.
ಈಗಾಗಲೇ ಕನ್ನಡಿಗರು ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ.ಮಹಾರಾಷ್ಟ್ರದ ಸೋಲಾಪುರ,ಲಾತೂರ,ಅಕ್ಕಲಕೋಟ,ದುಧನಿ,ಉಮರ್ಗಾ ಸೇರಿದಂತೆ ಇನ್ನೂ ಅನೇಕ ಕಡೆ ಕನ್ನಡ ಮಾತನಾಡುವ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ.ಅಂದ ಮಾತ್ರಕ್ಕೆ ಕರ್ನಾಟಕದಲ್ಲಿ ಈ ಪದೇಶಗಳು ಸೇರಿಸಬೇಕು ಎಂದು ನಾವೂ ಪಟ್ಟುಹಿಡಿದರೆ ಮರಾಠಿಗರು ಏನು ಉತ್ತರ ಕೊಡುತ್ತಾರೆ.ಹೀಗೆ ಕೇಳುವುದು ನ್ಯಾಯವೇ? ಮಹಾರಾಷ್ಟ್ರ ಸರ್ಕಾರಕ್ಕೆ ಅಷ್ಟು ಬದ್ಧತೆ ಇಲ್ಲದಿರುವುದು ದುರಂತ.
ಬೆಳಗಾವಿಯಲ್ಲಿ ಮರಾಠಿಗರು ಶಾಂತಿ, ಸಂಯಮದಿಂದ ಇದ್ದರೆ ಇರಲಿ.ಕುಚೇಷ್ಟೆ ಮಾಡುವಕದಾದರೆ ಅವರು ಮಹಾರಾಷ್ಟ್ರಕ್ಕೆ ತೆರಳಲಿ.ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯದಂತೆ ಎಚ್ಚರಿಕೆ ನೀಡಬೇಕು.ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು. ಗಡಿ ವಿವಾದವನ್ನು ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.