ಕಲಬುರಗಿ: ಸಮಾಜದ ಇಂದಿನ ತಲ್ಲಣಗಳಿಗೆ ಇದೇ ನೆಲದಲ್ಲಿ ಜನ್ಮ ತಳೆದ ಶರಣ ಚಳವಳಿಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಣೆಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಹೊರಟಿರುವ “ಮತ್ತೆ ಕಲ್ಯಾಣ” ಅಭಿಯಾನ ಅರ್ಥಪೂರ್ಣ ಮತ್ತು ಮಾದರಿಯಾಗುವಂತೆ ಮಾಡೋಣ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಶರಣು ಪಪ್ಪಾ ಮನವಿ ಮಾಡಿದರು.
ನಗರದ ಬಸವ ಮಂಟಪದಲ್ಲಿ ಶುಕ್ರವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನುಕುಲದ ಉದ್ಧಾರಕ್ಕೆ ದುಡಿದ ಬಸವಾದಿ ಶರಣರ ವಿಚಾರಗಳನ್ನು ಕಲುಷಿತಗೊಂಡಿರುವ ಸಮಾಜದಲ್ಲಿ ಬಿತ್ತುವುದು ಅಗತ್ಯವಾಗಿದ್ದು, ಸಮಾಜಕ್ಕೆ ಒಳಿತಾಗುವ ಇಂತಹ ಕಾರ್ಯಕ್ರಮಗಳಿಂದ ಕಲಬುರಗಿ ಶಾಂತಿ, ಸೌಹಾರ್ದದ ನೆಲೆವನೆಯಾಗಲಿದೆ. ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದೇ “ಮತ್ತೆ ಕಲ್ಯಾಣ”ಕಾರ್ಯಕ್ರಮದ ಉದ್ದೇಶ. ಸಮಾಜದಲ್ಲಿ ಕಲ್ಯಾಣಕರ ವಾತಾವರಣ ನಿರ್ಮಾಣ ಮಾಡಲು ಹೊರಟಿರುವ ಈ ಪವಿತ್ರ ಕಲ್ಯಾಣ ಯಾತ್ರೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಆ ದಿಸೆಯಲ್ಲಿ ಈಗಾಗಲೇ ಎಲ್ಲರೂ ಕಾರ್ಯಪ್ರವೃತ್ತರಾಗಿ ಅಭಿಯಾನದ ಯಶಸ್ವಿಗೆ ಪ್ರಾಮಾಣಿಕ ರೀತಿಯಲ್ಲಿ ಶ್ರಮಿಸಿದರೆ ಕಾರ್ಯಕ್ರಮ ಖಂಡಿತ ಯಶಸ್ವಿಯಾಗಲಿದೆ. ಯುವಕರು, ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾರ್ಯಾಧ್ಯಕ್ಷ ರವೀಂದ್ರ ಶಾಬಾದಿ ತಿಳಿಸಿದರು.
“ಮತ್ತೆ ಕಲ್ಯಾಣ” ಪ್ರಚಾರಕ್ಕಾಗಿ ಗೋಡೆ ಬರಹ, ಕರಪತ್ರ, ಆಮಂತ್ರಣ ಪತ್ರಿಕೆ ಸಿದ್ಧಪಡಿಸಿಕೊಂಡು ಜಿಲ್ಲಾದ್ಯಂತ ಸಂಚರಿಸಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರ ನಡೆಯಬೇಕು ಎಂಬುದು ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರ ಅಭಿಪ್ರಾಯವಾಗಿತ್ತು.
ಮತ್ತೆ ಕಲ್ಯಾಣ ಅಭಿಯಾನ ಸಮಿತಿಯ ಜಿಲ್ಲಾ ಸಂಚಾಲಕ ಸುನಿಲ್ ಹುಡಗಿ, ಪ್ರಮುಖರಾದ ಆರ್.ಜಿ. ಶೆಟಗಾರ, ಬಸವರಾಜ ಮೊರಬದ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ರೇಷ್ಮಿ, ರಾಜಶೇಖರ ಯಂಕಂಚಿ, ಶಿವರಂಜನ್ ಸತ್ಯಂಪೇಟೆ, ವಿಜಯಕುಮಾರ ತೇಗಲತಿಪ್ಪಿ, ಮಹಾಂತೇಶ ಕಲಬುರಗಿ, ಅಯ್ಯಣ್ಣಗೌಡ ಪಾಟೀಲ, ಹಣಮಂತರಾವ ಪಾಟೀಲ ಕುಸನೂರ, ಸತೀಶ ಸಜ್ಜನ್, ಪ್ರಸನ್ನ ವಾಂಜರಖೇಡೆ, ಬಾಬುರಾವ ಪಾಟೀಲ, ಶಿವಶರಣ ಕುಸನೂರ, ಶರಣರಾಜ್ ಛಪ್ಪರಬಂದಿ, ಬಿ.ಎಂ.ಪಾಟೀಲ ಕಲ್ಲೂರ, ಎಸ್.ಎನ್.ಪಾಟೀಲ, ರಾಜು ಕಾಡಾದಿ, ಪರಮೇಶ್ವರ ಶಟಕಾರ, ರಮೇಶ ಧುತ್ತರಗಿ, ನಾಗೇಂದ್ರಪ್ಪ ಮಾಡ್ಯಾಳೆ, ಶರಣು ಮತ್ತಿಮೂಡ, ಶಿವಶರಣಪ್ಪ ದೇಗಾಂವ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.