ಕಲಬುರಗಿ: ಭಾರತೀಯ ಸಮಾಜ ಲಿಂಗಬೇಧದ ಅಸಮಾನತೆಯಲ್ಲಿ ಬಳಲುತ್ತಿದ್ದಾಗ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಶೋಷಿತರಿಗೆ, ಬಡವರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ ಎಂದು ಹಿರಿಯ ಹೋರಾಟಗಾರ ಬಿ.ವಿ.ಚಕ್ರವರ್ತಿ ಅಭಿಪ್ರಾಯಪಟ್ಟರು.
ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಗುರುವಾರ ಏರ್ಪಡಿಸಿದ ಗುರು ಸಾವಿತ್ರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಥ ಶ್ರೇಷ್ಠ ಚಿಂತಕರ ಜಯಂತಿಗಳನ್ನು ಪರಿಷತ್ತು ಅರ್ಥಪೂರ್ಣವಾಗಿ ಆಯೋಜಿಸಿ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬಿತ್ತುತ್ತಿದ್ದಾರೆ ಎಂದು ಮನದುಂಬಿ ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಆಧುನಿಕ ಭಾರತದಮೊದಲ ಶಿಕ್ಷಕಿ, ಯಾವುದೇ ಜಾತಿ, ಧರ್ಮ, ವರ್ಗ ವೆನ್ನದೇ ಸಮಾನವಾಗಿ ಅಕ್ಷರದೂಟ ಉಣಬಡಿಸಿದ ತಾಯಿ ಸಾವಿತ್ರಿಬಾಯಿ ಫುಲೆ ಅವರ ಆದರ್ಶ ನಮಗೆಲ್ಲರಿಗೂ ಮಾದರಿಯಾಗಿದೆ. ಶಿಕ್ಷಕಿಯಾಗಿ ಅನೇಕ ರೀತಿಯ ಅವಮಾನಗಳನ್ನು ಮೆಟ್ಟಿ ನಿಂತು ಇಂದಿನ ಸಮಾಜಕ್ಕೆ ಬಹು ದೊಡ್ಡ ಸ್ಪೂರ್ತಿ ಆಗಿದ್ದಾರೆ ಎಂದರು.
ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಮನೆಯಿಂದಲೇ ವಿರೋಧ ವ್ಯಕ್ತವಾಗುತ್ತಿದ್ದ ಕಾಲದಲ್ಲಿ, ಇಡೀ ಸಮಾಜವೇ ವಿರೋಧ ಮಾಡುತ್ತಿರುವ ಕಾಲದಲ್ಲಿ ಮಹಿಳೆಯರಿಗೆ ಹಕ್ಕು ಸಿಗುವಂತಾಗಲು ಒಂದು ಅಸಾಧಾರಣ ಹೋರಾಟವನ್ನು ಮಾಡಿರುವ ಸಾವಿತ್ರಿಬಾಯಿ ಫುಲೆ ಅವರಿಗೆ ಇಂದಿನ ಮಹಿಳೆಯರು ಚಿರೃಣಿಯಾತಿರಬೇಕು ಎಂದು ನುಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಮುರುಗೇಶ ಗುಣಾರಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಶರಣರಾಜ ಛಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ, ರಾಜೇಂದ್ರ ಮಾಡಬೂಳ, ಶರಣಬಸವ ಜಂಗಿನಮಠ, ಕಸಾಪ ಕಾಳಗಿ ಅಧ್ಯಕ್ಷ ಸಂತೋಷ ಕುಡಳ್ಳಿ, ಸಿದ್ದಾರಾಮ ಹಂಚನಾಳ, ಬಿ.ಎಂ.ಪಾಟೀಲ ಕಲ್ಲೂರ ವೇದಿಕೆ ಮೇಲಿದ್ದರು.
ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿಂಧುಮತಿ ಭೋಸ್ಲೆ, ಅಂಕೀತಾ ಆರ್. ಸರಸಂಬಿ, ಸುಜಾತಾ ಆರ್. ಗಾರಂಪಳ್ಳಿ, ಸಂಗಮನಾಥ ಎಂ.ಗುಣಾರಿ, ಕವಿತಾ ಶೀಲವಂತ ಅವರನ್ನು ಗುರು ಸಾವಿತ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.