ಭಾಲ್ಕಿ: ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ 461ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಶರಣ ಮೇದಾರ ಕೇತಯ್ಯ ಜಯಂತಿ ಆಚರಣೆ ಮಾಡಲಾಯಿತು.
ಶರಣ ಮೇದಾರ ಕೇತಯ್ಯನವರು ಬಸವಾದಿ ಶರಣರ ಸಂಕುಲದಲ್ಲಿ ಜೀವನ ಸಾಗಿಸಿದ ಮಹಾನುಭಾವರು. ಶರಣ ಕೇತಯ್ಯನವರು ನಿರ್ಮೋಹಿ ಜೀವನ ಸಾಗಿಸಿದ ಶರಣರು. ಅವರ 18 ವಚನಗಳು ಲಭ್ಯ ಇವೆ. ಅವರು ತಮ್ಮ ವಚನಗಳಲ್ಲಿ ಆದರ್ಶ ಜೀವನ ಸಾಗಿಸುವ ಸಂದೇಶವನ್ನು ಅರ್ಥಪೂರ್ಣವಾಗಿ ನೀಡಿದ್ದಾರೆ. “ಭಕ್ತಂಗೆ ಸುಖವು ಸರಿ ದುಃಖವು ಸರಿ, ಉರಿ-ಸಿರಿ ಉಭಯವು ಸರಿ, ಎನ್ನರ್ದಿದಡೆ ಭಕ್ತನಿಗದೇ ಹಾನಿ, ಜಂಗಮವೆಂದು ಪ್ರಮಾಣಿಸಿ, ತನ್ಮಕಂಗಳ ಮುಂದೆ ಕಂಡವರ ಭಂಜಿಸಲಿಕ್ಕೆ ತನ್ನಂಗವ ಹೊರೆದಡೆ ತೀರ್ಥಪ್ರಸಾದಕ್ಕೆ ಅವನಂದೇ ಹೊರಗು ಗವರೇಶ್ವರಾ” ಎಂಬ ವಚನದಲ್ಲಿ ನಾವು ದೇವಮಾರ್ಗದಲ್ಲಿ ಮುನ್ನಡೆಯುವ ಭಕ್ತನಾಗಬೇಕು ಭಕ್ತಂಗೆ ಸುಖ-ದುಃಖ ಸಮನವಾಗಿರಬೇಕು ಎನ್ನುತ್ತ ಸಮಸ್ಥಿತಿಯ ಜೀವನ ಸಾಗಿಸುವ ಸಂದೇಶ ನೀಡಿದ್ದಾರೆ.
ಕಾಯಕ ಮತ್ತು ದಾಸೋಹ ಪ್ರೇಮಿಗಳು ಆಗಿದ್ದರು. ಅವರ ಕೈಗೊಂಡ ಕಾಯಕವಾದ ಬಿದುರು ಕಡಿಯಲಿಕ್ಕೆ ಹೋದಾಗ ಆ ಬಿದರಿನಿಂದ ಮುತ್ತುರತ್ನಗಳು ಉದರುತ್ತಿದ್ದವು. ಅದನ್ನು ಕಂಡು ಅವರು ಈ ಬಿದರಿನ ಗಿಡಕ್ಕೆ ಹುಳು ಹತ್ತಿವೆ ಎಂದು ಅದನ್ನು ಬಿಟ್ಟು ಹೋರಟು ಹೋಗುತ್ತಾರೆ. ಅಂದರೆ ಅಷ್ಟೊಂದು ನಿರ್ಮೋಹಿ ಜೀವನ ಅವರು ಸಾಗಿಸಿದರು. ಮನುಷ್ಯ ಸುಖಿಯಾಗಿರಬೇಕೆಂದು ಬಯಸಿದರೆ ಅವನು ನಿರ್ಮೋಹಿಯಾಗಬೇಕು. ಅತಿಯಾಸೆ ಬಿಡಬೇಕು ಎಂಬುದು ಶರಣ ಮೇದಾರ ಕೇತಯ್ಯನವರ ಚರಿತ್ರೆ ನಮಗೆ ಜೀವನದ ಪಾಠ ಹೇಳಿಕೊಡುತ್ತದೆ ಎಂದು ದಿವ್ಯ ಸನ್ನಿಧಾನ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶರಣ ಸಂಗಮೇಶ ವಾಲೆ ಅವರು ವಹಿಸಿಕೊಂಡಿದದರು. ರಾಜು ಜುಬರೆ ಅನುಭಾವ ನೀಡಿದರು. ಪ್ರೇಮಲಾ ತೊಂಡಾರೆ ಬಸವಗುರುಪೂಜೆ ನೆರವೇರಿಸಿದರು. ಹಣಮಂತಪ್ಪ ಚಿದ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಯಲ್ಲನಗೌಡರಿಂದ ವಚನ ಸಂಗೀತ ನಡೆಯಿತು. ಗುರುಪ್ರಸಾದ ಶಾಲೆಯ ಮಕ್ಕಳಿಂದ ಮೇದಾರ ಕೇತಯ್ಯ ರೂಪಕ ನೋಡುಗರ ಮನ ರಂಜಿಸಿತು.