ಎರಡನೇ ಹಂತದಲ್ಲಿ ಉಳಿದ ಪೌರಕಾರ್ಮಿಕರ ಸೇವೆ “ಖಾಯಂ”

0
15

ಕಲಬುರಗಿ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಶದಲ್ಲಿಯೇ ಮಾದರಿಯಾಗಿ 11,133 ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸಿದ್ದು, ಉಳಿದ ಪೌರ ಕಾರ್ಮಿಕರನ್ನು ಎರಡನೇ ಹಂತದಲ್ಲಿ ಖಾಯಂ ಭಾಗ್ಯ ಸಿಗಲಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಎಂ. ಶಿವಣ್ಣ ಕೋಟೆ ಹೇಳಿದರು.

ಬುಧವಾರ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳÀ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳಿಗೆ ಅರಿವು ಜಾಗೃತಿ, ನಿಗಮದ ಸೌಲಭ್ಯ ಕುರಿತು ಕಾರ್ಯಾಗಾರ ಹಾಗೂ ನಿಗಮದ ಸ್ವತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಪೌರ ಕಾರ್ಮಿಕರ ಮತ್ತು ಸ್ವಚ್ಛತಾ ಕಾರ್ಮಿಕರ ಬಗ್ಗೆ ತುಂಬಾ ಕಾಳಜಿ ಹೊಂದಿರುವ ಸರ್ಕಾರ ಇದಾಗಿದ್ದು, ಇತ್ತೀಚೆಗೆ ಬೆಳಗಾವಿಯಲ್ಲಿ ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಇವರನ್ನು “ಪೌರ ನೌಕರರು ಎಂದು” ಸಂಬೋಧಿಸಿ ಇತರೆ ಸರ್ಕಾರಿ ನೌಕರರಂತೆ ಗೌರವ ನೀಡಿದರು ಎಂದರು.

2013ರಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ ಜಾರಿಗೆ ತಂದು ಮಾನವ ಮಲ-ಮೂತ್ರ ತಲೆ ಮೇಲೆ ಹೂರುವುದನ್ನು ಮತ್ತು ಪಿಟ್‍ನಲ್ಲಿ ಒಳಗಡೆ ಹೋಗಿ ಕೆಲಸ ಮಾಡುವುದನ್ನು ನಿಷೇಧಿಸಿದ್ದರು ಸಹ ಅಲ್ಲಲ್ಲಿ ಮಾನವ ಸಮಾಜ ತಲೆ ತಗ್ಗಿಸುವಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಇದು ನಿರ್ಮೂಲನೆಯಾಗಬೇಕು. ಪಿಟ್ ಒಳಗಡೆ ಹೋಗಿ ಕೆಲಸ ಮಾಡಿದ ಪರಿಣಾಮ ಇದೂವರೆಗೆ ರಾಜ್ಯದಲ್ಲಿ 90 ಜನ ಸಾವನ್ನಪ್ಪಿದ್ದಾರೆ. ಸಫಾಯಿ ಕರ್ಮಚಾರಿಗಳು ಬೇರೆ ವೃತ್ತಿಯಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ಸಫಾಯಿ ಕರ್ಮಚಾರಿಗಳು ಮತ್ತು ಮ್ಯಾನುವೆಲ್ ಸ್ಯಾವೆಂಜರ್ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ಇಲ್ಲದೆ ಪ್ರವೇಶಾತಿ ನೀಡಲಾಗುತ್ತಿದ್ದು, ಮಕ್ಕಳನ್ನು ಇಲ್ಲಿಗೆ ಸೇರಿಸಿ ಉನ್ನತ ಶಿಕ್ಷಣ ಕೊಡಿಸಬೇಕು. ನಿಮ್ಮ ವೃತ್ತಿ ಮುಂದಿನ ಪೀಳಿಗೆಗೆ ಮುಂದುವರೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಕರ್ಮಚಾರಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ ಮಾತನಾಡಿ, ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳು ಪರ್ಯಾಯ ವೃತ್ತಿ ಕಂಡುಕೊಂಡು ತಮ್ಮ ಬದುಕು ನಡೆಸಲೆಂದು ಇಂದು ರಾಜ್ಯದಲ್ಲಿಯೇ ಆರಂಭಿಕವಾಗಿ ಜಿಲ್ಲೆಯ 186 ಜನರಿಗೆ ತಲಾ 5 ಲಕ್ಷ ರೂ. ಸಾಲ-ಸಹಾಯಧನ ವಿತರಣೆ ಪೈಕಿ ಮೊದಲನೇ ಹಂತದಲ್ಲಿ ಎಲ್ಲರಿಗೂ 2.50 ಲಕ್ಷ ರೂ. ಸಹಾಯಧನ ನೀಡಲಾಗಿದ್ದು, ಇದನ್ನು ಉಪಯೋಗಿಸಿಕೊಂಡು ಕಿರಾಣಿ ಅಂಗಡಿ, ಚಹಾ ಅಂಗಡಿ, ಬೀದಿ ಬದಿ ವ್ಯಾಪಾರಿ, ಸಣ್ಣ-ಪುಟ್ಟ ವಾಣಿಜ್ಯ ಅಂಗಡಿಗಳನ್ನು ತೆಗೆದು ಜೀವನ ನಡೆಸಬೇಕು. ಹಾಗಾದರೆ ಮಾತ್ರ ಮುಂದಿನ ಕಂತಿನ 2.50 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದಲ್ಲದೆ ನಿಗಮದ ದೊರೆಯುವ ಸೌಲಭ್ಯಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು.

ಸಮುದಾಯ ಭವನಕ್ಕೆ 1 ಕೋಟಿ ರೂ. ನೀಡಲು ಮನವಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಇತ್ತೀಚೆಗೆ ಪ್ರಯಾಗರಾಜ್‍ನಲ್ಲಿ ನಡೆದ ಕುಂಭಮೇಳ ಕಾರ್ಯಕ್ರÀಮ ನಂತರ ಸ್ವಚ್ಛತೆಯಲ್ಲಿ ತೊಡಗಿದ್ದ ಸಫಾಯಿ ಕರ್ಮಚಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾದಪೂಜೆ ಮಾಡಿರುವುದನ್ನು ಉಲ್ಲೇಖಿಸಿ ಈ ಸಮುದಾಯಕ್ಕೆ ಮೋದಿ ಸರ್ಕಾರ ನೀಡುತ್ತಿರುವ ಪ್ರಾಮುಖ್ಯತೆ ತಿಳಿಸಿದರು. ಕಲಬುರಗಿ ನಗರದ ಗಾಜೀಪರ ಪ್ರದೇಶದಲ್ಲಿ ನಿವೇಶನ ಲಭ್ಯವಿರುವುದರಿಂದ ಅಲ್ಲಿ ಈ ವರ್ಗಕ್ಕೆ ಸಮದಾಯ ಭವನ ನಿರ್ಮಿಸಲು ನಿಗಮದಿಂದ 1 ಕೋಟಿ ರೂ. ಅನುದಾನ ನೀಡಬೇಕೆಂದು ಕೋರಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು.

4.65 ಕೋಟಿ ರೂ. ಸಾಲ-ಸೌಲಭ್ಯ ವಿತರಣೆ: ಇದೇ ಸಂದರ್ಭದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಿಂದ ಕಲಬುರಗಿ ಜಿಲ್ಲೆಯ 186 ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳಿಗೆ ತಲಾ 5 ಲಕ್ಷ ರೂ. ಸಾಲ-ಸಹಾಯಧನ ಪೈಕಿ ಇಂದು ಸಂಕೇತಿಕವಾಗಿ ಎಲ್ಲರಿಗೂ 2.50 ಲಕ್ಷ ರೂ. ಸಹಾಯಧನದ ಚೆಕ್ ನೀಡಲಾಯಿತು. ಉಳಿದಂತೆ ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳ 10 ಜನ ಫಲಾನುಭವಿ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲು ಟ್ಯಾಬ್ ಸಹ ವಿತರಿಸಲಾಯಿತು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯೆ ಗೀತಾ ವಾಡೆಕರ್, ರಾಜ್ಯ ಮಟ್ಟದ ಸ್ಟೀರಿಂಗ್ ಮತ್ತು ಸಲಹಾ ಸಮಿತಿ ಸದಸ್ಯ ವಿಜಯಕುಮಾತ ಎನ್. ಅಡಕಿ, ಸಫಾಯಿ ಕರ್ಮಚಾರಿಗಳ ಜಲ್ಲಾ ಜಾಗೃತ್ ಸಮಿತಿ ಸದಸ್ಯರಾದ ಅನೀಲ ಚಕ್ರೆ, ಶರಣು ಅತನೂರ, ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ಜಿಲ್ಲಾ ಜಾಗೃತ್ ಸಮಿತಿ ಸದಸ್ಯರಾದ ನರ್ಮದಾ ಹತ್ವಾಲ್, ರಾಜಕುಮಾರ ಗವಾರಿಯಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಕಲಬುರಗಿ ಮಹಾನಗರ ಪಾಲಿಕೆಯ ಚವ್ಹಾಣ, ಮಹೇಶ ಗುತ್ತೇದಾರ, ಚೆನ್ನಬಸವ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಫಾಯಿ ಕರ್ಮಚಾರಿಗಳು ಭಾಗವಹಿಸಿದ್ದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಧೀರ ಡಿ. ಸಂಗೋಳಿಕರ ಸ್ವಾಗತಿಸಿದರು. ಡಾ.ರಾಜಶೇಖರ ಮಾಂಗ್ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here