ಕಲಬುರಗಿ: ಸಿದ್ಧರಾಮೇಶ್ವರರು ಸೊಲ್ಲಾಪುರದಲ್ಲಿ ಅನೇಕ ರಸ್ತೆ, ಛತ್ರಗಳು, ಕೆರೆ-ಕಟ್ಟೆ ನಿರ್ಮಿಸಿ, ಜನ ಹಾಗೂ ಪಶು-ಪಕ್ಷಿಗಳಿಗೆ ಅನಕೂಲ ಮಾಡಿಕೊಡುವ ಮೂಲಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದರು. ಕಾಯಕಯೋಗಿ, ಶಿವಯೋಗಿಯಾಗಿ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಶರಣರು, ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತನಾಮದೊಂದಿಗೆ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾರಸತ್ವ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ವಚನಗಳ ಅಳವಡಿಕೆಯಿಂದ ಕಲ್ಯಾಣ ರಾಷ್ಟ್ರ ನಿರ್ಮಾಣವಾಗುತ್ತದೆ. ಸಿದ್ದರಾಮೇಶ್ವರರ ಸಾಮಾಜಿಕ, ಸಾಹಿತ್ಯಕ್ಕೆ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನ ಚಿಗರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಹಾಗೂ ‘ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕ ಇವುಗಳು ಸಂಯುಕ್ತವಾಗಿ ಭಾನುವಾರ ಏರ್ಪಡಿಸಿದ್ದ ಶರಣ ‘ಸಿದ್ಧರಾಮೇಶ್ವರರ 850ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ.ರಾ.ಪ್ರಾ.ಶಾ.ಶಿ.ಸಂಘದ ಆಳಂದ ತಾಲೂಕಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ಸಾಮಾಜಿಕ ಸುಧಾರಣೆ ವಿಶ್ವದ ಇತಿಹಾಸದಲ್ಲಿಯೇ ಪ್ರಮುಖವಾಗಿದೆ. ಸೊಲ್ಲಾಪೂರದಲ್ಲಿ ಮತ್ತು ಅನುಭವ ಮಂಟಪದ ಮೂಲಕ ಅನೇಕ ಜನಪರ ಕಾರ್ಯಗಳನ್ನು ಮಾಡಿರುವ ಸಿದ್ಧರಾಮೇಶ್ವರರು, ಸಾಮಾಜಿಕ ಪರಿವರ್ತನೆಯ ಚೇತನಾಶಕ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ಎಂ.ಬಿ.ನಿಂಗಪ್ಪ, ರಾಜಶೇಖರ ಬಿ.ಮರಡಿ, ಶಿವಯೋಗಪ್ಪ ಬಿರಾದಾರ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ಸಾಗರ ಜಿ.ಬಂಗರಗಿ, ಅಣ್ಣಾರಾಯ ಎಚ್.ಮಂಗಾಣೆ, ಸೂರ್ಯಕಾಂತ ಸಾವಳಗಿ, ಬಸವರಾಜ ಹೆಳವರ ಯಾಳಗಿ, ಸಿದ್ದಲಿಂಗ ಮಲಶೆಟ್ಟಿ, ವಿಶ್ವನಾಥ ಕಂಬಾರ, ರಾಜು ಕೊರಳ್ಳಿ, ಶ್ರೀಶೈಲ್ ನಂದೇಣಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.