ಕಲಬುರಗಿ: ವಿಶ್ವಜ್ಯೋತಿ ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರೆಂದು ಘೋಷಿಸಬೇಕು ಎಂದು ಹುನಗುಂದ್ ತಾಲ್ಲೂಕಿನ ಕೂಡಲಸಂಗಮದಲ್ಲಿ ಜರುಗಿದ 36ನೇ ಶರಣ ಮೇಳದಲ್ಲಿ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಯಿತು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪಿ.ಎಸ್. ಮಹಾಗಾಂವಕರ್ ಹಾಗೂ ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ್ ಅವರು ಹೇಳಿದರು.
ಭಾನುವಾರ ಶರಣ ಮೇಳದ ಕುರಿತು ಜಂಟಿಯಾಗಿ ಮಾತನಾಡಿದ ಅವರು, ಹುನಗುಂದ ಮತಕ್ಷೇತ್ರವನ್ನು ಕೂಡಲ ಸಂಗಮ ಮತಕ್ಷೇತ್ರವನ್ನಾಗಿ ಪರಿವರ್ತಿಸುವಂತೆ, ಕೇಂದ್ರ ಸರ್ಕಾರವು ಬಸವ ಜಯಂತಿಯನ್ನು ಆಚರಿಸುವುದರೊಂದಿಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಒತ್ತಾಯಿಸಿದರು.
ರಾಷ್ಟ್ರೀಯ ಬಸವದಳದ ನೇತೃತ್ವದಲ್ಲಿ ತೆಲಂಗಾಣ್ ರಾಜ್ಯದ ಹೈದ್ರಾಬಾದ್ ನಗರದಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಬೃಹತ್ ರ್ಯಾಲಿಯನ್ನು ಆಯೋಜಿಸಲು ನಿರ್ಣಯಿಸಲಾಗಿದೆ ಎಂದು ಅವರು ಹೇಳಿದರು.
ನೂತನವಾಗಿ ನಿರ್ಮಾಣಗೊಳ್ಳಲಿರುವ ಸಂಸತ್ತಿನ ಕಟ್ಟಡಕ್ಕೆ ಅನುಭವ ಮಂಟಪ ಎಂದು ನಾಮಕರಣ ಮಾಡುವಂತೆ ಅವರು ಒತ್ತಾಯಿಸಿದರು. ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬಸವರಾಜ್ ಧನ್ನೂರ್ ಅವರು ನಿರ್ಣಯಗಳನ್ನು ಮಂಡಿಸಿದರು. ಸಭಿಕರು ಅನುಮೋದಿಸಿದರು.
ಜಗದ್ಗುರು ಮಾತೆ ಗಂಗಾದೇವಿ, ಜಗದ್ಗುರು ಬಸವ ಕುಮಾರಸ್ವಾಮಿಗಳು, ಜಗದ್ಗುರು ಸಿದ್ಧರಾಮೇಶ್ವರ್ ಸ್ವಾಮಿಗಳು, ಸದ್ಗುರು ಬಸವಯೋಗಿ ಸ್ವಾಮೀಜಿ, ಅನಿಮಿಷಾನಂದ್ ಸ್ವಾಮೀಜಿ, ಕರ್ನಾಟಕ ರಾಜ್ಯ ರಾಷ್ಟ್ರೀಯ ಬಸವದಳದ ನೂತನ ಅಧ್ಯಕ್ಷ ಚನ್ನಬಸವ ಬಿಜಲಿ ಗೋಕಾಕ್, ತಮಿಳ್ನಾಡು, ತೆಲಂಗಾಣ್ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಸುಬ್ರಹ್ಮಣ್ಯಂ, ಶಂಕರೆಪ್ಪ ಪಾಟೀಲ್ ಜಾಹೀರಾಬಾದ್ ಮುಂತಾದವರು ಉಪಸ್ಥಿತರಿದ್ದರು.