ಕಲಬುರಗಿ: ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ಮರುಳಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನಾಗರಾಜ ಅರಳಿ ತಿಳಿಸಿದರು.
ನಗರದ ವೀರಶೈವ ವಸತಿ ನಿಲಯದ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಕಲಬುರಗಿ ಸರ್ಕಾರಿ ವಿಭಾಗೀಯ ಮುದ್ರಣಾಲಯದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿವಶರಣಪ್ಪ ಬಸವಣ್ಣಪ್ಪ ಕುಸನೂರ ವಯೋನಿವೃತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಮುಖಿ ಕಾರ್ಯದಲ್ಲಿ ತೊಡಗುವವರು ಸದಾ ಸ್ಮರಣೀಯರಾಗಿರುತ್ತಾರೆ ಎಂದು ತಾವು ಬೆಳೆದು ಬಂದ ಪರಿಯನ್ನು ಸಭೆಯ ಎದುರಿಗೆ ತೆರೆದಿಟ್ಟರು.
ನಮಗಾಗಿ ಬದುಕುವುದರ ಜೊತೆಗೆ ಮತ್ತೊಬ್ಬರಿಗಾಗಿ ಬದುಕಬೇಕು ಎಂದು ಕರೆ ನೀಡಿದರು. ಭ್ರಷ್ಟಾಚಾರ, ಜಾತೀಯತೆ ಅನೈತಿಕತೆಯಿಂದ ಮುಕ್ತಗೊಳಿಸುವ ಕಾರ್ಯ ಇಂದಿನ ನಾಗರಿಕರು ಮಾಡಬೇಕಿದೆ. ಛಲಬೇಕು ಶರಣಂಗೆ ಇರುವುದನ್ನು ಬಿಟ್ಟು ನೋಟು ಕೊಟ್ಟವರಿಗೆ ವೋಟ್ ನೀಡುತ್ತಿದ್ದೇವೆ ಎಂದರು.
ಬುದ್ದ, ಬಸವ, ಅಂಬೇಡ್ಕರ್ ನಂತರವೂ ಮತ್ತೆ ಕಲ್ಯಾಣ ಅಭಿಯಾನ ಮಾಡಬೇಕಾಗಿರುವುದು ವಿಷಾದದ ಸಂಗತಿ ಎಂದರು. ಮುಖ್ಯ ಅತಿಥಿಯಾಗಿದ್ದ ಶಾಸಕ ದತ್ತಾತ್ರೇಯ ಪಾಟೀಲ ಮಾತನಾಡಿದರು. ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ನಿಡಗುಂದಾ ಜಿಪಂ ಸದಸ್ಯ ಶರಣು ಮೆಡಿಕಲ್, ದಕ್ಷಿಣ ಭಾರತ ಔಷಧ ತಜ್ಞರ ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ ಅತಿಥಿಗಳಾಗಿ ಆಗಮಿಸಿದ್ದರು.
ಶಿವಶರಣಪ್ಪ ಕುಸನೂರ ದಂಪತಿ ವೇದಿಕೆಯಲ್ಲಿದ್ದರು. ಇದೇ ವೇಳೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸತ್ಕರಿಸಲಾಯಿತು. ಬಾಬುರಾವ ಪಾಟೀಲ ಆಶಯ ನುಡಿ ನುಡಿದರು. ಡಾ. ಕೆ.ಗಿರಿಮಲ್ಲ ನಿರೂಪಿಸಿದರು. ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು