ಸುರಪುರ: ನಗರದ ಹಸನಾಪುರ ಕ್ಯಾಂಪ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಬಿಜೆಎನ್‍ಎಲ್ ವ್ಯಾಪ್ತಿಯ ಹೊಲಗಾಲುವೆ ವಿಭಾಗ-2(ಕಾಡಾ) ಕಚೇರಿಯನ್ನು ಸ್ಥಳಾಂತರ ಮಾಡದೆ ಅದನ್ನು ಇಲ್ಲಿಯೇ ಮುಂದುವರೆಸಬೇಕು ಒಂದು ವೇಳೆ ಸ್ಥಳಾಂತರಗೊಳಿಸಿದಲ್ಲಿ ಈ ಭಾಗದ ರೈತರೊಂದಿಗೆ ಬೀದಿಗಿಳಿದು ಹೋರಾಟ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಭೀಮರಾಯನಗುಡಿ ಕಾಡಾ ಆಡಳಿತಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು ಸುರಪುರ ಮತಕ್ಷೇತ್ರ ವ್ಯಾಪ್ತಿಯ ಹಸನಾಪುರ ಕ್ಯಾಂಪ್‍ನಲ್ಲಿರುವ ಹೊಲಗಾಲುವೆ ವಿಭಾಗ-2 ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯನ್ನು ಇಲ್ಲಿಂದ ಬಾಗಲಕೋಟೆಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವ ಕುರಿತು ನಿರ್ದೇಶನ ನೀಡಿರುವ ಬಗ್ಗೆ ಗಮನಕ್ಕೆ ಬಂದಿದ್ದು ಯಾದಗಿರ ಮತ್ತು ರಾಯಚೂರು ಎರಡು ಜಿಲ್ಲೆಗಳಿಗೆ ಕೇವಲ ಒಂದೇ ಈ ವಿಭಾಗ ಕಚೇರಿಯಾಗಿರುವ ಈ ಕಚೇರಿಯನ್ನು ಸ್ಥಳಾಂತರಗೊಳಿಸುವುದು ಸರಿಯಲ್ಲ ಎಂದು ಹೇಳಿದರು.
ಈ ಕಚೇರಿ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅತಿ ಹಿಂದುಳಿದ ಪ್ರದೇಶವಾಗಿರುವ ಸುರಪುರ, ಹುಣಸಗಿ, ದೇವದುರ್ಗ, ಲಿಂಗಸುಗೂರು, ಮಾನ್ವಿ, ರಾಯಚೂರು, ಯಾದಗಿರ, ಚಿತ್ತಾಪುರ ಹಾಗೂ ಗುರುಮಿಠಕಲ್ ತಾಲೂಕುಗಳ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ರಸ್ತೆ, ಬೋರವೆಲ್(ಎಸ್‍ಸಿಪಿ ಮತ್ತು ಟಿಎಸ್‍ಪಿ) ಹೊಲಗಾಲುವೆ, ಬಸಿಗಾಲುವೆ ಹಾಗೂ ಚೆಕ್ ಡ್ಯಾಮ್ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದ್ದು ಈ ಕೆಲಸಗಳನ್ನು ಪೂರ್ಣಗೊಳಿಸಲು ಕಚೇರಿಯು ಹಸನಾಪುರ ವಸಹಾತುವಿನಲ್ಲಿಯೇ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ ಅಲ್ಲದೆ ನಾರಾಯಣಪುರ ಎಡದಂಡೆ ಕಾಲುವೆ ಅಡಿಯಲ್ಲಿ ಬರುವ ವಿತರಣಾ ಕಾಲುವೆಗಳಾದ, ಹುಣಸಗಿ ಮತ್ತು ಶಹಾಪುರ ಶಾಖಾ ಕಾಲುವೆಗಳ ವ್ಯಾಪ್ತಿಯಲ್ಲಿ ಸಾವಿರಾರು ಹೇಕ್ಟರ್ ಪ್ರದೇಶದಲ್ಲಿ ಜೌಗು, ಸವಳು, ಜವಳು ಬಾಧಿತ ಪ್ರದೇಶವಾಗುತ್ತಿದ್ದು ಸದರಿ ಪ್ರದೇಶವನ್ನು ಭೂಸುಧಾರಣೆ ಕಾರ್ಯ ಕೈಗೊಳ್ಳವುದು ಅತೀ ಅವಶ್ಯವಿರುತ್ತದೆ, ದೇವದುರ್ಗ ಮತ್ತು ರಾಯಚೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಡಿ-9ಎ ಎನ್.ಆರ್.ಬಿ.ಸಿ. ಹಾಗೂ ಎನ್‍ಎಲ್‍ಬಿಸಿ ಎಕ್ಸಟೆನ್ಷನ್‍ನಲ್ಲಿ ಸುಮಾರು 60,000 ಹೆಕ್ಟೇರ ಪ್ರದೇಶದಲ್ಲಿ ಹೊಲಗಾಲುವೆ ಕಾಮಗಾರಿ ನಿರ್ಮಾಣದಂತಹ ಗುರುತರವಾದ ಜವಾಬ್ದಾರಿ ಈ ಕಚೇರಿಯು ಹೊಂದಿದೆ ಎಂದು ತಿಳಿಸಿದರು.
ಈಗಾಗಲೇ ಆಲಮಟ್ಟಿ ಆಣೆಕಟ್ಟು ವಿಭಾಗದಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ಹೊಲಗಾಲುವೆ ವಿಭಾಗ ಸಂಖ್ಯೆ-3, ಕಾರ್ಯನಿರ್ವಾಹಕ ಅಭಿಯಂತರರು ಕಾಲುವೆ ವಿಭಾಗ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಗೇಟ್ ವಿಭಾಗ ಈ ಮೂರು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಈಗ ಇಲ್ಲಿರುವ ಕಾಡಾ ಕಚೇರಿಯನ್ನು ಸ್ಥಳಾಂತರಿಸಲು ಹೊರಟಿರುವುದು ಈ ಭಾಗದ ರೈತರಿಗೆ ಸರಕಾರ ಮಾಡುವ ಮಹಾ ಮೋಸ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು ಕೂಡಲೇ ಕಚೇರಿ ಸ್ಥಳಾಂತರಗೊಳಿಸುವ ನಿರ್ದೇಶನವನ್ನು ಹಿಂಪಡೆದು ಇಲ್ಲಿಯೇ ಮುಂದುವರಸಬೇಕು ಒಂದು ವೇಳೆ ಕಚೇರಿ ಸ್ಥಳಾಂತರಗೊಳಿಸಲು ಯತ್ನಿಸಿದಲ್ಲಿ ರೈತರೊಂದಿಗೆ ಹೋರಾಟ ಕೈಗೊಳ್ಳುವುದು ಅನಿವಾರ್ಯ ಎಂದು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.