ಆಳಂದ: ಶಾಲೆಯೊಂದು ಸರಸ್ವತಿ ಮಂದಿರ, ಅದರಲ್ಲಿ ಎಲ್ಲರೂ ಸಮಾನರು, ಸರಸ್ವತಿಯನ್ನು ಆರಾಧಿಸುವವರು ತಮ್ಮ ಜೀವನದಲ್ಲಿ ಮಹತ್ತರ ಸಾಧನೆ ಮಾಡುತ್ತಾರೆ ಎಂದು ಯಳಸಂಗಿಯ ಸಿದ್ಧಾರೂಢ ಮಠದ ಪೀಠಾಧಿಪತಿ ಪರಮಾನಂದ ಶ್ರೀಗಳು ಆಶೀರ್ವಚನ ನೀಡಿದರು.
ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ‘ಹಳೆಯ ವಿದ್ಯಾರ್ಥಿಗಳ ಸಂಘದಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮೀಲನ’ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಅಂಕಗಳನ್ನು ಗಳಿಸುವುದಷ್ಟೇ ಹೇಳುವುದಲ್ಲದೇ, ವಿದ್ಯಾರ್ಥಿಯು ತನ್ನ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುವಂತಹ ಜೀವನ ಕೌಶಲ್ಯಗಳನ್ನು ಹೇಳಿಕೊಡುವುದು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ, ಆ ತರಹದ ಕೌಶಲ್ಯಗಳು ಈ ಶಾಲೆಯ ಹಳೆಯ ವಿದ್ಯಾರ್ಥಿಗಳಲ್ಲಿ ಕಾಣಿಸಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.
ವಿದ್ಯಾರ್ಥಿಗಳು ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೆ, ಶಾಲೆಯಲ್ಲಿಯೇ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಮುಂದೆ ದೊಡ್ಡ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ನಮ್ಮ ದೇಶದ ಶೈಕ್ಷಣಿಕ ಪರಂಪರೆಯನ್ನು ವಿದ್ಯಾರ್ಥಿಗಳು ಉಳಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಕಾಲೇಜು ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಶಾಲೆಯ 50 ಕ್ಕೂ ಹೆಚ್ಚಿನ ಹಳೆಯ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರೌಢ ಶಾಲೆಯ ಅಭಿವೃದ್ಧಿಗಾಗಿ ದಾನ ನೀಡಿದ ದಾನಿಗಳಿಗೂ ಸನ್ಮಾನಿಸಿದರು.
ಸಮಾರಂಭದಲ್ಲಿ ವರ್ಗಾವಣೆಗೊಂಡ ಶಿಕ್ಷಕರಾದ ಲಾಲ್ ಭಾಷಾ, ಶಹಾಜಿ ನಾಗಣೆ, ಶಿವನಗೌಡ ಪಾಟೀಲ್ ಸೇರಿದಂತೆ ಇನ್ನಿತರ ಶಿಕ್ಷಕರು ತಮ್ಮ ಅವಧಿಯಲ್ಲಿನ ಶಾಲೆಯ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಪಾಟೀಲ್ ಮಾತನಾಡಿ, 15 ಕ್ಕೂ ಹೆಚ್ಚಿನ ಎಸ್ಸೆಸ್ಸೆಲ್ಸಿ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ಕೂಡಿಕೊಂಡು ಈ ತರಹ ದೊಡ್ಡ ಗುರುವಂದನಾ ಕಾರ್ಯಕ್ರಮ ರೂಪಿಸಿರುವುದು ದಾಖಲೆಯೇ ಸರಿ ಎಂದು ಹೇಳಿದ ಅವರು, ಹಳೆಯ ವಿದ್ಯಾರ್ಥಿಗಳ ದೇಣಿಗೆ ಯಿಂದಲೇ ಶಾಲೆಯ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಇ ಸಿ ಓ ಪ್ರಕಾಶ್ ಕೊಟ್ರೆ, ಎಸ್ಡಿಎಂಸಿ ಅಧ್ಯಕ್ಷ ಮೋತಿರಾಮ್ ಚವ್ಹಾಣ್, ಕಾಲೇಜಿನ ಪ್ರಾಚಾರ್ಯ ಸುಭಾಷ್ ನಾಟೀಕರ್, ಪ್ರೌಢ ಶಾಲೆಯ ಸಂಸ್ಥಾಪನೆ ಗೆ ಕಾರಣರಾದ ಅಪ್ಪಾರಾವ್ ಪಾಟೀಲ್, ಶ್ರೀಮಂತ ತೇಲಿ, ಶಿವಲಿಂಗಯ್ಯ ಮಠಪತಿ, ಶಿವಾನಂದ ಮಗಿ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಾರಾಮ್ ಪಾಳೆದ್ ಸ್ವಾಗತಿಸಿದರು. ದಾಮೋದರ ಸರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಭಾರತಿ ಧೋತ್ರೆ ನಿರೂಪಿಸಿದರು. ಈ ವೇಳೆ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಾಗರ ಯಲ್ದೆ, ದಸ್ತಗೀರ ನದಾಫ್, ಮಲ್ಲಿಕಾರ್ಜುನ್, ರಾಜು ಧೂಪದ, ಶಿವರಾಜ್ ಕಾಂತಾ, ಸೂರ್ಯಕಾಂತ್ ಉಮ್ಮರ್ಗಿ, ಸಿದ್ದಾರಾಮ್ ಕುಂಬಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
*’ಹಳೆಯ ಸಂಗಮ’ :* ಶಾಲೆಯ ಆವರಣದಲ್ಲಿ ಹಳೆಯ ಶಿಕ್ಷಕರ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಗಮವಾಯಿತು. ಪರಸ್ಪರ ಭೇಟಿಯಾಗಿ ಮಾತುಕತೆ ಒಂದೆಡೆ, ಫೋಟೋ ಶೇಷನ್ ನಡೆಯಿತು.